ADVERTISEMENT

ಭತ್ತದ ನಾಡಿನಲ್ಲಿ ಸುಂದರ ಜಲಧಾರೆಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 4:54 IST
Last Updated 9 ಆಗಸ್ಟ್ 2024, 4:54 IST
ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡದ ಹತ್ತಿರ ತುಂಗಭದ್ರ ನದಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ಕೃಷಿಗಾಗಿ ನೀರು ಹರಿಸಲು ಕಟ್ಟಲಾದ ಸಂಗ್ರಹ ಕಟ್ಟೆಗಳ ಮೇಲೆ ಈಗ ನೀರು ಜಲಪಾತದಂತೆ ದುಮ್ಮಿಕ್ಕುತ್ತಿದೆ
ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡದ ಹತ್ತಿರ ತುಂಗಭದ್ರ ನದಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ಕೃಷಿಗಾಗಿ ನೀರು ಹರಿಸಲು ಕಟ್ಟಲಾದ ಸಂಗ್ರಹ ಕಟ್ಟೆಗಳ ಮೇಲೆ ಈಗ ನೀರು ಜಲಪಾತದಂತೆ ದುಮ್ಮಿಕ್ಕುತ್ತಿದೆ   

ಸಿರುಗುಪ್ಪ: ತಾಲ್ಲೂಕಿನ ಕೆಂಚನಗುಡ್ಡದ ಹತ್ತಿರ ವಿಜಯನಗರ ಅರಸರ ಕಾಲದಲ್ಲಿ ಕೃಷಿಗಾಗಿ ನೀರು ಹರಿಸಲು ನಿರ್ಮಿಸಿರುವ ಸಂಗ್ರಹ ಕಟ್ಟೆಗಳ ಮೇಲೆ ತುಂಗಭದ್ರಾ ನದಿಯ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿವೆ. ನೋಡುಗರಿಗೆ ಅದು ಹಾಲಿನ ನೊರೆಯಾಗಿ ಕಂಗೊಳಿಸುತ್ತಿದೆ. ತುಂಗಭದ್ರಾ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಕೆಂಚನಗುಡ್ಡದಲ್ಲಿ ಜಲಪಾತಗಳು ಸೃಷ್ಟಿಯಾಗಿವೆ.

ವಿದ್ಯುತ್‌ ಸ್ಥಾವರಕ್ಕೆ ನೀರು ಒದಗಿಸಲು ಕಟ್ಟಲಾದ ಕಾಲುವೆ ಕಟ್ಟಡದ ಎಡಭಾಗದಲ್ಲಿ ನೀರು ಹರಿಯುವುದು ಜಲಪಾತದಂತಿದೆ. ಈ ನಯನ ಮನೋಹರ ದೃಶ್ಯ ನೋಡುವುದಕ್ಕೆ ಜನರು ಬರುತ್ತಿದ್ದಾರೆ.

ದೇಶನೂರು ಕಟ್ಟೆಯಲ್ಲಿ ಗೋಕಾಕ್ ಜಲಪಾತದ ಮಾದರಿಯಲ್ಲಿ ನೀರು ರಭಸದಿಂದ ದುಮ್ಮಿಕ್ಕುವ ದೃಶ್ಯ ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ. ಇಲ್ಲಿರುವ ಪ್ರಾಕೃತಿಕ ಬಂಡೆಗಳಲ್ಲಿ ಸಹಜವಾಗಿ ನಿರ್ಮಾಣವಾಗಿರುವ ಜಲಪಾತಗಳ ಸೌಂದರ್ಯ ಸವಿಯಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ADVERTISEMENT

ಸಿರುಗುಪ್ಪದಿಂದ 6 ಕಿ.ಮೀ.ದೂರದಲ್ಲಿರುವ ಕೆಂಚನಗುಡ್ಡಕ್ಕೆ ಆಟೋ, ಬಸ್ ವ್ಯವಸ್ಥೆ ಇದ್ದು, ಸುಮಾರು 2ಕಿ.ಮೀ. ನಡೆದುಕೊಂಡು ಹೋಗಬೇಕು. ನದಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ, ವಾಹನ ಸೌಲಭ್ಯ ಇರುವವರು ನದಿ ಸಮೀಪಕ್ಕೆ ಹೋಗಬಹುದು.

ಅಪಾಯದ ಜಾಗದಲ್ಲಿ ಸೆಲ್ಫಿಗಳು: ಝುಳು ಝುಳು ಹರಿಯುವ ನೀರಿನ ಕಟ್ಟೆಗಳ ಮೇಲೆ ನಿಂತು ಮೊಬೈಲ್‌ನಿಂದ ಸೆಲ್ಫಿ ತೆಗೆಸಿಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ. ಇಲ್ಲಿ ನೀರಿನ ಆಳ ಹೆಚ್ಚಾಗಿದ್ದು, ಆಕಸ್ಮಿಕವಾಗಿ ಜಾರಿ ಬಿದ್ದರೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಯಾವುದೇ ಭದ್ರತಾ ಸಿಬ್ಬಂದಿಯನ್ನು ಇಲ್ಲಿ ನೇಮಿಸಿಲ್ಲ.

ಮಳೆಗಾಲದಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ಇಲ್ಲಿ ಸಾರ್ವಜನಿಕರ ದಂಡು ಕೆಂಚನಗುಡ್ಡಕ್ಕೆ ಭೇಟಿ ನೀಡುತ್ತಾರೆ. ನದಿಯಲ್ಲಿ ಸ್ನಾನಮಾಡಿ ಪೂಜೆ ಸಲ್ಲಿಸಿ ಮನೆಯಿಂದ ತಂದ ತಿಂಡಿಯನ್ನು ಸವಿದು ನದಿಯ ಸೌಂದರ್ಯ ಕಣ್ತುಂಬಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.