ಬಳ್ಳಾರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ವರ್ತಕರು ಮತ್ತು ದಲ್ಲಾಳಿಗಳ ನಡುವೆ ಮತ್ತೆ ಮುನಿಸು ತಲೆದೋರಿದ್ದು, ಶುಕ್ರವಾರ ಇಡೀ ದಿನ ವಹಿವಾಟು ಸ್ಥಗಿತಗೊಂಡಿತ್ತು.
‘ಕೆಲ ವರ್ತಕರು ರೈತರಿಂದ ನೇರವಾಗಿ ಶೇಂಗಾ ಖರೀದಿಸಿದ್ದಾರೆ. ಹೀಗೆ ಅಕ್ರಮವಾಗಿ ವ್ಯಾಪಾರ ಮಾಡಿದ ಮೂರು ಅಂಗಡಿಗಳಲ್ಲಿ ಟೆಂಡರ್ ಮಾಡಬಾರದು’ ಎಂದು ದಲ್ಲಾಳಿಗಳ ಸಂಘ ಒತ್ತಾಯಿಸಿದೆ. ಆದರೆ, ಇದಕ್ಕೆ ಒಪ್ಪದ ವರ್ತಕರ ಸಂಘವು ಶೇಂಗಾ ಖರೀದಿಸದಿರಲು ನಿರ್ಧರಿಸಿದೆ.
‘ಮೂರು ಅಂಗಡಿಗಳಲ್ಲಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳ್ಳುವವರೆಗೆ ಶೇಂಗಾ ಮಾರಾಟ ಮಾಡದಿರಲು ದಲ್ಲಾಳಿಗಳ ಸಂಘ ನಿರ್ಧರಿಸಿದೆ. ಅವರು ಮಾರಿದರೆ, ನಾವು ಕೂಡಲೇ ಟೆಂಡರ್ ಆರಂಭಿಸುತ್ತೇವೆ’ ಎಂದು ವರ್ತಕರು ಹೇಳಿದರು.
ದೂರದ ಊರುಗಳಿಂದ ಶೇಂಗಾ ತಂದು ಮಾರಲಾಗದೆ ಬಿರು ಬಿಸಿಲಲ್ಲಿ ರೈತರು ಸಂಕಷ್ಟಕ್ಕೆ ಒಳಗಾದರು. ದಲ್ಲಾಳಿಗಳ ಸಂಘದ ಪ್ರತಿನಿಧಿಗಳೇ, ರೈತರಿಗೆ ಊಟ, ವಸತಿ ವ್ಯವಸ್ಥೆ ಮಾಡಿದರು.
‘ಏಕಾಏಕಿಯಾಗಿ ಮಾರಾಟ ಸ್ಥಗಿತಗೊಳಿಸಿದ್ದಕ್ಕೆ ಇಬ್ಬರ ಕಡೆಯಿಂದಲೂ ಸ್ಪಷ್ಟನೆ ಕೇಳಲಾಗಿದೆ. ರೈತರಿಗೆ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ಕೂಡಲೇ, ಖರೀದಿ ಪ್ರಕ್ರಿಯೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನಂಜುಂಡಸ್ವಾಮಿ ತಿಳಿಸಿದರು.
ಸದ್ಯ ಎಪಿಎಂಸಿಗೆ ನಿತ್ಯ 2,500 ಕ್ವಿಂಟಲ್ ಶೇಂಗಾ ಆವಕವಾಗುತ್ತಿದ್ದು, ಪ್ರತಿ ಕ್ವಿಂಟಲ್‌ಗೆ ₹6,000ರಿಂದ ₹7,800 ದರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.