ADVERTISEMENT

ಬಳ್ಳಾರಿ ಘರ್ಷಣೆ: ಸಿಐಡಿಯಿಂದ ದಾಖಲೆ ಸಂಗ್ರಹ ಬಹುತೇಕ ಪೂರ್ಣ

ಸೋಮವಾರವೂ ಪೊಲೀಸ್‌ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿದ ಸಿಐಡಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 7:21 IST
Last Updated 13 ಜನವರಿ 2026, 7:21 IST
ಬಳ್ಳಾರಿ ನಗರದ ಡಿಎಆರ್‌ ಮೈದಾನದಲ್ಲಿ ಸೋಮವಾರ ಪೊಲೀಸ್‌ ಇಲಾಖೆಯಿಂದ ಗಲಭೆ ನಿಯಂತ್ರಣ ಅಣಕು ಪ್ರದರ್ಶನ ನಡೆಯಿತು. 
ಬಳ್ಳಾರಿ ನಗರದ ಡಿಎಆರ್‌ ಮೈದಾನದಲ್ಲಿ ಸೋಮವಾರ ಪೊಲೀಸ್‌ ಇಲಾಖೆಯಿಂದ ಗಲಭೆ ನಿಯಂತ್ರಣ ಅಣಕು ಪ್ರದರ್ಶನ ನಡೆಯಿತು.    

ಬಳ್ಳಾರಿ: ಹೊಸ ವರ್ಷದ ಮೊದಲ ದಿನ ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಅವ್ವಂಬಾವಿಯಲ್ಲಿ ನಡೆದ ಘರ್ಷಣೆ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಅಪರಾಧ ತನಿಖಾ ದಳ (ಸಿಐಡಿ) ಅಧಿಕಾರಿಗಳು, ದಾಖಲೆ ಹಾಗೂ ಮಾಹಿತಿ ಸಂಗ್ರಹವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. 

ಸಿಐಡಿ ಎಸ್‌ಪಿ ಹರ್ಷಾ ಪ್ರಿಯಂವಾದ, ಒಬ್ಬರು ಡಿಎಸ್‌ಪಿ, ಇಬ್ಬರು ಸಿಪಿಐಗಳು ಸೇರಿದಂತೆ ಸಿಬ್ಬಂದಿಯೊಂದಿಗೆ ಬಳ್ಳಾರಿಗೆ ಭಾನುವಾರ ಆಗಮಿಸಿರುವ ತಂಡ, ಪೊಲೀಸ್‌ ಇಲಾಖೆಯಿಂದ ಎಲ್ಲ ದಾಖಲೆಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ಸುಪರ್ದಿಗೆ ಪಡೆಯಿತು. 

ಸೋಮವಾರ ಸಂಜೆಯ ಹೊತ್ತಿಗೆ ದಾಖಲೆಗಳ ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮಂಗಳವಾರ ಬೆಂಗಳೂರಿಗೆ ಮರಳುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. 

ADVERTISEMENT

ಸಿರುಗುಪ್ಪ ರಸ್ತೆಯ ಜನಾರ್ದನ ರೆಡ್ಡಿ ಮನೆ ಸುತ್ತಮುತ್ತಲ ಸಿಸಿ ಟಿವಿ ಕ್ಯಾಮೆರಾಗಳ ವಿಡಿಯೊಗಳನ್ನು ತನಿಖಾ ತಂಡ ವಶಕ್ಕೆ ಪಡೆಯುತ್ತಿದೆ. ಆದರೆ, ಈ ವರೆಗೆ ಸಿಕ್ಕಿರುವುದು ಮೂರು ಕ್ಯಾಮೆರಾಗಳ ವಿಡಿಯೊಗಳು ಮಾತ್ರ. ಉಳಿದ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಹೀಗಾಗಿ ಮಾಧ್ಯಮಗಳು, ಸ್ಥಳದಲ್ಲಿದ್ದವರು ಸಂಗ್ರಹಿಸಿದ ವಿಡಿಯೊಗಳನ್ನು ಮಾತ್ರವೇ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಲಾಗಿದೆ. 

‘ಸಿಐಡಿ ಅಧಿಕಾರಿಗಳು ಪೊಲೀಸ್‌ ಇಲಾಖೆಯಿಂದ ಸಂಗ್ರಹಿಸಿದ ದಾಖಲೆಗಳನ್ನು ಬೆಂಗಳೂರಿಗೆ ಕೊಂಡೊಯ್ದು ಅಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಬಳಿಕ ಯಾರನ್ನು ವಿಚಾರಣೆಗೆ ಕರೆಯಬೇಕು ಎಂಬುದರ ಪಟ್ಟಿ ಮಾಡಿಕೊಂಡು ಎಲ್ಲರನ್ನೂ ಬೆಂಗಳೂರಿಗೇ ಕರೆಸಿಕೊಂಡು ಪ್ರಶ್ನೆ ಮಾಡುತ್ತಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಅಗತ್ಯ ಎದುರಾದರೆ ಇಲ್ಲವೇ ಸರ್ಕಾರ ಸೂಚನೆ ನೀಡಿದರೆ ಸಿಐಡಿಗೆ ಬಳ್ಳಾರಿಯಲ್ಲೇ ಕಚೇರಿ ಮಾಡಿಕೊಡುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನಾ ಪನ್ನೇಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.   

ಗನ್‌ಮ್ಯಾನ್‌ಗಳ ಪರಿಶೀಲನೆ: ಈ ಮಧ್ಯೆ, ಭರತ್‌ ರೆಡ್ಡಿ ಮತ್ತು ಸತೀಶ್‌ ರೆಡ್ಡಿ ಅವರ ಖಾಸಗಿ ಅಂಗರಕ್ಷಕರ ಬಂದೂಕು ಪರವಾನಗಿಯನ್ನೂ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಕೋರಿ ಜಮ್ಮು ಕಾಶ್ಮೀರಕ್ಕೆ ಮನವಿ ಸಲ್ಲಿಸಲಾಗಿದೆ ಎಂದೂ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

4 ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಪೊಲೀಸ್‌ ಇಲಾಖೆಯಿಂದ ದಾಖಲೆಗಳನ್ನು ಒದಗಿಸಲಾಗಿದೆ. ತನಿಖೆ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್‌ ಇಲಾಖೆ ಬಳಿ ಇಲ್ಲ. ಉಳಿದ ಎರಡು ಪ್ರಕರಣಗಳು ಜಾತಿನಿಂದನೆಗೆ ಸಂಬಂಧಿಸಿದ್ದಾಗಿದ್ದು ಡಿಸಿಆರ್‌ಇ ತನಿಖೆ ಮಾಡುತ್ತಿದೆ.

– ಸುಮನ್‌ ಪನ್ನೇಕರ್‌ ಎಸ್‌ಪಿ ಬಳ್ಳಾರಿ  

ಕಾಲಾಯ ತಸ್ಮೈ ನಮಃ

ಬಳ್ಳಾರಿ: ಘರ್ಷಣೆ ಪ್ರಕರಣ ಮತ್ತು ತನಿಖೆಯ ಕುರಿತು ಮಾತನಾಡಿದ ಶಾಸಕ ಭರತ್ ರೆಡ್ಡಿ ‘ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ಕಾಲಾಯ ತಸ್ಮೈ ನಮಃ’ ಎಂದು ಮಾರ್ಮಿಕವಾಗಿ ನುಡಿದರು.  ಬಳ್ಳಾರಿ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ತನಿಖೆ ನಡೆಯುತ್ತಿದೆ. ನಾನೂ ಕೆಲ ದಿನಗಳಿಂದ ಕ್ಷೇತ್ರದಲ್ಲಿ ಇರಲಿಲ್ಲ. ಸರ್ಕಾರ ಪ್ರಕರಣವನ್ನು ಸಿಐಡಿಗೆ  ನೀಡಿದೆ. ಸತ್ಯಾಸತ್ಯತೆ ಹೊರಬರಲಿದೆ’ ಎಂದು ಹೇಳಿದರು. 

ಗಲಭೆ ನಿಯಂತ್ರಣ ಅಣಕು ಕಸರತ್ತು 

ಜ.1ರಂದು ನಡೆದಿದ್ದ ಘರ್ಷಣೆ ವೇಳೆ ಪೊಲೀಸ್‌ ಸಿಬ್ಬಂದಿ ತೋರಿದ ಪ್ರತಿರೋಧ ತೃಪ್ತಿಕರವಾಗಿರಲಿಲ್ಲ ಎಂದು ಹೇಳಲಾಗಿದೆ. ಇದೇ ಉದ್ದೇಶಕ್ಕೆ ಬಳ್ಳಾರಿ ಪೊಲೀಸ್‌ ವರಿಷ್ಠಾಧಿಕಾರಿಯು ತಮ್ಮ ಸಿಬ್ಬಂದಿಯಿಂದ  ಸೋಮವಾರ ಗಲಭೆ ನಿಯಂತ್ರಣ ಅಣಕು ಕಸರತ್ತು ಮಾಡಿಸಿದರು.  ಈ ವೇಳೆ ಮಾತನಾಡಿದ ಅವರು ‘ಆಂತರಿಕ ಭದ್ರತೆ ಕಾನೂನು ಸುವ್ಯವಸ್ಥೆಗೆ ಪೊಲೀಸರೇ ಹೊಣೆಗಾರರಾಗಿರುತ್ತಾರೆ. ಆದ್ದರಿಂದಲೇ ಸಿಬ್ಬಂದಿಯಿಂದ ಅಣಕು ಪ್ರದರ್ಶನ ಮಾಡಿಸಲಾಗಿದೆ’ ಎಂದರು.  ‘ಸಿಬ್ಬಂದಿ ಈ ಕಸರತ್ತನ್ನು ನಿಯಮಿತವಾಗಿ ಮಾಡುತ್ತಿರಬೇಕು. ತುರ್ತು ಸ್ಥಿತಿ ಯಾವಾಗ ಸೃಷ್ಟಿಯಾಗುತ್ತವೆ ಎಂಬುದನ್ನು ಹೇಳಲಾಗದು. ಅದಕ್ಕೆ ಸದಾ ಸಿದ್ಧವಾಗಿರಬೇಕು. ಕಸರತ್ತಿನಲ್ಲಿ ಇನ್ನಷ್ಟು ಪರಿಪೂರ್ಣತೆ ಬರಬೇಕು’ ಎಂದು ತಿಳಿಸಿದರು.  ‘ಬಳ್ಳಾರಿಯಲ್ಲಿ ಶಾಂತಿ ಸ್ಥಾಪಿಸುವ ಕಾರಣಕ್ಕೆ ಭದ್ರತೆಯನ್ನು ನಿಯೋಜಿಸಲಾಗಿದೆ. ಅದನ್ನು ಹಂತ ಹಂತವಾಗಿ ಕಡಿತ ಮಾಡಲಾಗುವುದು’ ಎಂದು ಇದೇ ವೇಳೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.