ಪ್ರಾತಿನಿಧಿಕ ಚಿತ್ರ
ಬಳ್ಳಾರಿ: ಬಳ್ಳಾರಿಯಲ್ಲಿ ಜನವರಿ 1ರಂದು ನಡೆದ ಘರ್ಷಣೆ ಮತ್ತು ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಕಾಂಗ್ರೆಸ್ ಮತ್ತು ಬಿಜೆಪಿಯ 67 ಜನರಿಗೆ ಸೆಕ್ಷನ್ 107ರಡಿ ನೋಟಿಸ್ ಜಾರಿ ಮಾಡಿದೆ.
‘ಶಾಂತಿಗೆ ಭಂಗ ತಂದ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯಲಾಗಿದೆ. ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು ಸೇರಿ ಬಿಜೆಪಿಯ 33 ಮಂದಿ, ಸತೀಶ್ ರೆಡ್ಡಿ, ಚಾನಾಳ್ ಶೇಖರ್, ನಾರಾ ಭರತ್ ರೆಡ್ಡಿ, ನಾರಾ ಪ್ರತಾಪ ರೆಡ್ಡಿ, ನಾರಾ ಸೂರ್ಯನಾರಾಯಣ ರೆಡ್ಡಿ ಸೇರಿ ಕಾಂಗ್ರೆಸ್‌ನ 34 ಮಂದಿಗೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಪರವಾನಗಿ ಸಮೀಕ್ಷೆ: ಜಿಲ್ಲಾಡಳಿತವು ಶಸ್ತ್ರಾಸ್ತ್ರ ಪರವಾನಗಿ ಸಮೀಕ್ಷೆಗೆ ಮುಂದಾಗಿದ್ದು, ಪೊಲೀಸ್ ಇಲಾಖೆಗೆ ಜನವರಿ 5ರಂದು ಪತ್ರ ಬರೆದಿದೆ.
‘ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ಸ್ವಯಂ ರಕ್ಷಣೆಗಾಗಿ ಮಂಜೂರು ಮಾಡಿರುವ ಶಸ್ತ್ರಾಸ್ತ್ರ, ಪರವಾನಗಿ ಅಗತ್ಯದ ಬಗ್ಗೆ ಮರು ಸಮೀಕ್ಷೆ ನಡೆಸುವುದು ಅಗತ್ಯವಿದೆ. ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಹೊಂದುವ ಅಗತ್ಯವಿರುವ ಬಗ್ಗೆ ವೈಯಕ್ತಿಕ ಸಮೀಕ್ಷೆ ಮಾಡಬೇಕು. ಮುಂದಿನ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಪತ್ರ ಬರೆದಿದ್ದಾರೆ.
ಎಸ್‌ಪಿ ಅಧಿಕಾರ ಸ್ವೀಕಾರ: ಬಳ್ಳಾರಿಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಸುಮನ್ ಪನ್ನೇಕರ್ ಗುರುವಾರ ಅಧಿಕಾರ ಸ್ವೀಕರಿಸಿದರು. ಉಸ್ತುವಾರಿ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅಧಿಕಾರಿ ಹಸ್ತಾಂತರ ಮಾಡಿದರು. ಕರ್ತವ್ಯಕ್ಕೆ ವರದಿ ಮಾಡಿಕೊಂಡ ಮೊದಲ ದಿನವೇ ಅವರು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಮಾಹಿತಿ ಸಂಗ್ರಹಿಸಿದರು.