ADVERTISEMENT

ಬಳ್ಳಾರಿ: 15 ವಲಯಗಳಿಗೆ ನಿರಂತರ ನೀರು

₹260.60 ಕೋಟಿ ಮೊತ್ತದ ಯೋಜನೆ| ಕೆಎಂಇಆರ್‌ಸಿಯಿಂದ ಅನುದಾನ | ಮೂರು ವರ್ಷದಲ್ಲಿ ಸಾಕಾರ ನಿರೀಕ್ಷೆ

ಆರ್. ಹರಿಶಂಕರ್
Published 31 ಆಗಸ್ಟ್ 2025, 5:06 IST
Last Updated 31 ಆಗಸ್ಟ್ 2025, 5:06 IST
ಬಳ್ಳಾರಿ ನಗರದ ನಕ್ಷೆ. ನೀಲಿ ಬಣ್ಣದ ಪ್ರದೇಶಗಳಲ್ಲಿ 24x7 ನೀರು ಪೂರೈಸುವ ಕಾಮಗಾರಿ ನಡೆಯಲಿದೆ
ಬಳ್ಳಾರಿ ನಗರದ ನಕ್ಷೆ. ನೀಲಿ ಬಣ್ಣದ ಪ್ರದೇಶಗಳಲ್ಲಿ 24x7 ನೀರು ಪೂರೈಸುವ ಕಾಮಗಾರಿ ನಡೆಯಲಿದೆ   

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 15 ವಲಯಗಳಿಗೆ ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಇನ್ನು ಮೂರು ವರ್ಷಗಳಲ್ಲಿ ಯೋಜನೆಯ ಫಲ ನಗರ ನಾಗರಿಕರಿಗೆ ಲಭ್ಯವಾಗಲಿದೆ. 

ಸದ್ಯ ನಗರದಲ್ಲಿ 8ರಿಂದ 10 ದಿನಗಳಿಗೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಈ ಯೋಜನೆ ಸಾಕಾರವಾದರೆ, 15 ವಲಯಗಳ ಕನಿಷ್ಠ 42,500 ಸಾವಿರ ಮನೆಗಳಿಗೆ, ಅಂದರೆ, ನಗರದ ಒಟ್ಟಾರೆ ಜನಸಂಖ್ಯೆಯ ಶೇ 35–40ರಷ್ಟು ಜನರಿಗೆ ನಿರಂತರವಾಗಿ ನೀರು ಸಿಗಲಿದೆ. 

ಈ ಯೋಜನೆಗೆ ‘ಗಣಿ ಬಾಧಿತ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)’ ಅನುಮೋದನೆ ನೀಡಿದ್ದು, ₹260.60 ಕೋಟಿ ಅನುದಾನವನ್ನೂ ನೀಡಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶವೂ ಸಿಕ್ಕಿದೆ. 

ADVERTISEMENT

ಯೋಜನೆಯಲ್ಲಿ 75 ಎಂ.ಎಂನಿಂದ 200 ಎಂ.ಎಂ ವ್ಯಾಸದ ಒಟ್ಟು 398.878 ಕಿಲೊ ಮೀಟರ್‌ ಉದ್ದದ ಅಂತರ್ಗತ ‘ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ಕೊಳವೆ (ಎಚ್‌ಡಿಪಿಇ)’ ಜಾಲವನ್ನು ಹಾಕಲಾಗುತ್ತಿದೆ. 

10 ಲಕ್ಷ ಲೀಟರ್‌ನ 3 ಓವರ್ ಹೆಡ್ ಟ್ಯಾಂಕ್, 15 ಲಕ್ಷ ಲೀಟರ್‌ನ 3, 15 ಲಕ್ಷ ಲೀಟರ್‌ನ 15 ಮೀಟರ್‌ ಎತ್ತರದ 9, 5 ಲಕ್ಷ ಲೀಟರ್‌ನ- 1 ಓವರ್‌ ಹೆಡ್‌ ಟ್ಯಾಂಕ್‌ ಅನ್ನು ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಈ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ಯೋಜನೆಯಲ್ಲಿ ವಿವರಿಸಲಾಗಿದೆ.

ಅಲ್ಲಿಪುರ, ಡಿಸಿ ನಗರ, ಕೂನಿಠಾಣ (ಬೆಳಗಲ್‌ ಕ್ರಾಸ್‌) ಗುಗ್ಗರಹಟ್ಟಿ, ಜಾಗೃತಿನಗರ, ರೇಡಿಯೊ ಪಾರ್ಕ್‌, ಬಳ್ಳಾರಪ್ಪ ಕಾಲೊನಿ, ಎನ್‌ಆರ್‌ ಪಾರ್ಕ್‌ (ಶ್ರೀರಾಂಪುರ ಕಾಲೊನಿ), ಕೆಎಚ್‌ಬಿ ಕಾಲೊನಿ (ನೇತಾಜಿ ನಗರ), ಕೋಟೆ, ಕೆಎಚ್‌ಬಿ ಕಾಲೊನಿ (ಸೋಂತಲಿಂಗಣ್ಣ ಕಾಲೋನಿ ), ಅವ್ವಂಬಾವಿ, ಮತ್ತು ಹೊಸ ಅಂದ್ರಾಳುವಿನಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳು ನಿರ್ಮಾಣವಾಗುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ನೀರು ಸರಬರಾಜುಗೊಳ್ಳಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೋಜನೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಜನರು ಕೊಳವೆ ಸಂಪರ್ಕಕ್ಕಾಗಿ ಅರ್ಜಿ ಹಾಕುವ ಅಗತ್ಯವೇ ಇಲ್ಲ. ಜಲಮಂಡಳಿ ಅಧಿಕಾರಿಗಳೇ ಮನೆಗಳ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ. ನಾಗರಿಕರು ತಮ್ಮ ಆಧಾರ್‌ ಸಂಖ್ಯೆ ಮತ್ತು ವಿದ್ಯುತ್‌ ಬಿಲ್‌ ಸಂಖ್ಯೆ ನೀಡಿದರೆ ಆಯ್ತು. ಮಾಹಿತಿ ಸಂಗ್ರಹಣೆಯನ್ನೂ ಜನ ಅನುಮಾನದಿಂದ ನೋಡುತ್ತಿದ್ದಾರೆ. ಯಾವುದೇ ಹಿಂಜರಿಕೆ ಇಲ್ಲದೇ ಜನ ಮಾಹಿತಿ ಒದಗಿಸಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ನೆರವು ನೀಡಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.

ನೀರಿನ ಸಂಪರ್ಕಕ್ಕೆ ನಾಗರಿಕರು ಅರ್ಜಿ ಹಾಕಬೇಕಿಲ್ಲ ಹಣ ಭರಿಸಬೇಕಿಲ್ಲ. ನಲ್ಲಿ ಸಂಪರ್ಕ ಕೊಡಿಸುವುದಾಗಿ ಯಾರಾದರೂ ಹಣ ಪಡೆದರೆ ನಾಗರಿಕರು ಇಲಾಖೆಗೆ ನೇರವಾಗಿ ದೂರು ನೀಡಬಹುದು
ಜಯಕುಮಾರ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಹಿಂದಿನ ಯೋಜನೆ ಏನಾಯ್ತು?:

ನಗರದ 46 ವಲಯಗಳ ಪೈಕಿ ಈ ಹಿಂದೆ 31 ವಲಯಗಳಲ್ಲಿ ನಿರಂತರ ನೀರು ಪೂರೈಕೆ ಉದ್ದೇಶದೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಯಿತಾದರೂ ಅದು ಏನಾಗಿದೆ ಎಲ್ಲಿಯ ವರೆಗೆ ಬಂದಿದೆ ಯಾರ್‍ಯಾರಿಗೆ ಸಂಪರ್ಕ ದೊರೆತಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. 31 ವಲಯಗಳನ್ನು ಹೊರತುಪಡಿಸಿ ಉಳಿದ ಕಡೆ ಜಾರಿಯಾಗುತ್ತಿರುವ ಯೋಜನೆಯ ಮೇಲೆ ಪಾಲಿಕೆಯೂ ತೀವ್ರ ನಿಗಾ ವಹಿಸಿದೆ. ತೀರ ಹತ್ತಿರದಿಂದ ಪರಿಶೀಲನೆ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.