
ಸಂಡೂರು: ‘ರಾಜಕೀಯ ಕ್ಷೇತ್ರಕ್ಕೆ ನಾನು ಹಣ ಮಾಡಲು ಬಂದಿಲ್ಲ. ರಾಜ್ಯದ ಜನರ ವಿಶ್ವಾಸ, ಪ್ರೀತಿಗಳಿಸಲು ಬಂದಿದ್ದು, ಸಂಡೂರು ಕ್ಷೇತ್ರವು ನನಗೆ ರಾಜಕೀಯ ಮರುಜೀವ ನೀಡಿದ ಕ್ಷೇತ್ರವಾಗಿದೆ. ನಾನು, ನಮ್ಮ ಲಾಡ್ ಕುಟುಂಬವು ನಮ್ಮ ಜೀವ ಇರುವವರೆಗೂ ಸಂಡೂರು ಕ್ಷೇತ್ರದ ಜನರ ಸೇವೆಯನ್ನು ನಿರಂತರವಾಗಿ ಮಾಡುತ್ತೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಹೇಳಿದರು.
ತಾಲ್ಲೂಕಿನ ವಿಠಲಾಪುರ ಗ್ರಾಮದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
‘ತೋರಣಗಲ್ಲು ಹೋಬಳಿಯ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ತುಂಗಭದ್ರ ಜಲಾಶಯದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದ್ದು, ಗ್ರಾಮೀಣ ಪ್ರದೇಶದ ಸುಮಾರು 80ಸಾವಿರ ಮಹಿಳೆಯರ ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರನ್ನು ನೀಡಲಾಗಿದೆ. ಗ್ರಾಮೀಣ ಜನರ ಉತ್ತಮ ಆರೋಗ್ಯಕ್ಕಾಗಿ ಎನ್‍ಎಂಡಿಸಿ ಕಂಪನಿಯಿಂದ 13 ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರ ಉನ್ನತ ಶಿಕ್ಷಣಕ್ಕಾಗಿ ಸಂಡೂರಿನಲ್ಲಿ ನೂತನ ನರ್ಸಿಂಗ್ ಕಾಲೇಜುನ್ನು ಅತಿ ಶೀಘ್ರವಾಗಿ ಆರಂಭಿಸಲಾಗಿದೆ’ ಎಂದರು.
‘ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಾಗಿದ್ದು, ರೂ.594ಕೋಟಿ ಮಹಿಳೆಯರು ಸಾರಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. 1.50ಕೋಟಿ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗಿದೆ. ಎಲ್ಲ ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಒಟ್ಟು ರೂ.60ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಲಾಗುತ್ತಿದೆ’ ಎಂದರು.
‘ಸಂಡೂರು ಕ್ಷೇತ್ರಕ್ಕೆ ಶಿಕ್ಷಣ, ಆರೋಗ್ಯ, ವಿದ್ಯುತ್, ಕುಡಿಯುವ ನೀರು, ರಸ್ತೆ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಸಂಡೂರು ಕ್ಷೇತ್ರವು ಬಳ್ಳಾರಿ ಜಿಲ್ಲೆ, ಕಲ್ಯಾಣ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲೆ ಅಭಿವೃದ್ಧಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಅದಕ್ಕೆ ಸಂಸದ ತುಕಾರಾಂ, ಶಾಸಕಿ ಅನ್ನಪೂರ್ಣ ಅವರ ನಿರಂತರ ಶ್ರಮ ಬಹಳ ಮುಖ್ಯವಾಗಿದೆ’ ಎಂದರು.
ಸಂಸದ ತುಕಾರಾಂ ಅವರು ಪ್ರಸ್ತಾವಿಕವಾಗಿ ಮಾತನಾಡಿ, ‘ಸಂತೋಷ್ ಲಾಡ್ ಅವರು 2004ರಿಂದ ಸಂಡೂರಿನಲ್ಲಿ ರಾಜಕೀಯ ಜೀವನ ಆರಂಭವಾಗಿದ್ದು, ಇಂದು ರಾಜ್ಯದಲ್ಲಿ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಂಡಿದ್ದಾರೆ. ಲಾಡ್ ಅವರ ಶ್ರಮದಿಂದ ಸಂಡೂರು ಕ್ಷೇತ್ರದಲ್ಲಿ 11 ಸರ್ಕಾರಿ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ರೂ.425ಕೋಟಿ ವೆಚ್ಚದಲ್ಲಿ ಗ್ರಾಮೀಣ ಜನರಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲಾಗಿದೆ. ಸಂಡೂರು ಕ್ಷೇತ್ರಕ್ಕೆ ಒಟ್ಟು 4,700 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಹಿಂದೂಳಿದ ತಾಲ್ಲೂಕಿನ ಹಣೆಪಟ್ಟಿಯಿಂದ ಹೊರ ತರಲಾಗಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿಯಲ್ಲಿ ರೂ.5ಸಾವಿರ ಕೋಟಿ ವೆಚ್ಚದಲ್ಲಿ ನೂತನ ಜಿನ್ಸ್ ಪಾರ್ಕ್‍ನ್ನು ನಿರ್ಮಾಣ ಮಾಡಿ ರಾಹುಲ್ ಗಾಂಧಿ ಅವರಿಂದ ಉದ್ಘಾಟನೆ ಮಾಡಿಸಲಾಗುವುದು’ ಎಂದರು.
ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ‘ಲಾಡ್ ಅವರು ನಮಗೆ ರಾಜಕೀಯ ಗುರುಗಳಾಗಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಯಲು ಎಲ್ಲ ಇಲಾಖೆಗಳ ನೇತೃತ್ವದಲ್ಲಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಗಣಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ವಸತಿ ನಿಲಗಳನ್ನು ಸ್ಥಾಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಹಸಿರು, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.
ತೋರಣಗಲ್ಲು ಹೋಬಳಿಯ ಎಲ್ಲ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಭೂದಾನ ಮಾಡಿದ ವ್ಯಕ್ತಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭೀಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಹಾಯ ಧನದ ಚೆಕ್‍ಗಳನ್ನು ನೀಡಿ ಗೌರವಿಸಲಾಯಿತು. ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಕಿಟ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.
ಲಿಡ್ಕರ್ ನಿಗಮದ ಅಧ್ಯಕ್ಷ ಮುಡ್ರಿಗಿ ನಾಗರಾಜ್, ರಾಜ್ಯ ಖನಿಜ ನಿಗಮದ ಉಪಾಧ್ಯಕ್ಷ ಲಕ್ಷ್ಮಣ, ಜಿಲ್ಲಾ ಗ್ಯಾರಂಟಿ ಯೀಜನೆಗಳ ಅಧ್ಯಕ್ಷ ಚಿದಾನಂದಪ್ಪ, ವಾಡಾ ಅಧ್ಯಕ್ಷ ಅಕ್ಷಯ್ ಲಾಡ್, ಮಾಜಿ ಎಂಎಲ್‍ಸಿ ಕೆಎಸ್‍ಎಲ್ ಸ್ವಾಮಿ, ಇಒ ಮಡಗಿನಬಸಪ್ಪ, ಬಿಇಒ ಐ.ಆರ್.ಅಕ್ಕಿ, ಸಮಾಜ ಕಲ್ಯಾಣ ಅಧಿಕಾರಿ ವೆಂಕಟೇಶ್, ಸಿಡಿಪಿಒ ನಾಗರಾಜ, ಮುಖಂಡರಾದ ಏಕಾಂಬ್ರಪ್ಪ, ಮಾನಯ್ಯ, ವಿ.ರಾಜಶೇಖರ್, ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಅಧಿಕಾರ ಹಂಚಿಕೆ ವಿಚಾರದ ಪ್ರಶ್ನೆಗೆ ಸಿಡಿಮಿಡಿಗೊಂಡ ಲಾಡ್: ಅಧಿಕಾರ ಶಾಶ್ವತ ಅಲ್ಲ ಈ ಫಿಲಾಸಫಿ ಎಲ್ಲರಿಗೂ ಗೊತ್ತಿದೆ. ನಾವು ಬೌದ್ಧ ಧರ್ಮವನ್ನು ಪಾಲನೆ ಮಾಡುತ್ತಿದ್ದೇವೆ. ರಾಜಕೀಯ ಸೇರಿದಂತೆ ಯಾವುದು ಶಾಶ್ವತ ಅಲ್ಲ. ಆಕಸ್ಮಿಕವಾಗಿ ಜೀವನದಲ್ಲಿ ಏರುಪೇರಾಗುವುದು ಸಾಮಾನ್ಯ. ಆದರೆ ಶ್ರೀಮಂತರು ಬಡವರಾಗುತ್ತಾರೆ ಬಡವರು ಶ್ರೀಮಂತರಾಗುತ್ತಾರೆ. ಸಿಎಂ ಅಧಿಕಾರಿ ಹಂಚಿಕೆ ವಿಚಾರ ನಿಮಗೆ ಅರ್ಥವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಿಎಂ, ಡಿಸಿಎಂ ಅವರುಗಳು ಪರಸ್ಪರ ಅವರವರ ಮನೆಗೆ ಹೋಗಿ ಬಂದಿದ್ದಾರೆ. ಅವರು ಈಗಾಗಲೇ ಗಂಭೀರ ಸಮಸ್ಯೆಗೆ ಅಂತ್ಯ ಹಾಡಿದ್ದಾರೆ. ಪದೇ ಪದೇ ಇದೇ ವಿಚಾರದ ಬಗ್ಗೆ ಪ್ರಶ್ನೆ ಮಾಡಿದರೇ ನಾನು ಉತ್ತರ ಕೊಡಲು ಆಗುವುದಿಲ್ಲ. ಸತೀಶ್ ಜಾರಕಿ ಹೊಳಿ ಹೇಳಿದ್ದನ್ನು ಅವರನ್ನೆ ಕೇಳಬೇಕು. ದೇಶದಲ್ಲಿ ಬಿಎಲ್‍ಒ ಸಾವನ್ನಪ್ಪಿದ್ದಾರೆ. ದೇಶಕ್ಕೆ ಕಪ್ಪು ಹಣ ವಾಪಸ್ ಬರುತ್ತಿಲ್ಲ ಇದರ ಬಗ್ಗೆ ಮೋದಿ ಅವರನ್ನು ವಿಚಾರಿಸಿದರೇ ಅವರು ಸರಿಯಾಗಿ ಉತ್ತರ ಕೊಡುತ್ತಿಲ್ಲ ಈ ಬಗ್ಗೆ ಯಾರು ಪ್ರಶ್ನೆ ಮಾಡಲ್ಲ ಎಂದು ಮೋದಿ ವಿರುದ್ಧ ಸಂತೋಷ್ ಲಾಡ್ ಅವರು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.