ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್‌ಕೆಯು) ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಓಂಕಾರಪ್ಪ ಓಲೇಕಾರ ಅವರನ್ನು ಬದಲಾವಣೆ ಮಾಡಿ, ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ.ಗೌರಿ ಮಾಣಿಕ್ ಮಾನಸ ಅವರನ್ನು ನೇಮಿಸುವಂತೆ ಪ್ರಭಾರ ಕುಲಪತಿ ಪ್ರೊ. ಅನಂತ ಎಲ್. ಝಂಡೇಕರ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದು ಕ್ಯಾಂಪಸ್‌ನಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈಚೆಗೆ ಕುಲಸಚಿವ (ಆಡಳಿತ), ಕೆಎಎಸ್ ಅಧಿಕಾರಿ ಎಸ್.ಎನ್. ರುದ್ರೇಶ್ ಅವರೊಂದಿಗೆ ‘ಮುಸುಕಿನ ಗುದ್ದಾಟ‘ ನಡೆಸಿ ಅವರಿಂದ ಕೆಲವೊಂದು ಅಧಿಕಾರ ಕಸಿದುಕೊಂಡು, ಪುನಃ ಹಿಂತಿರುಗಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದ ಪ್ರಭಾರ ಕುಲಪತಿ ಈಗ ಕುಲಸಚಿವ (ಮೌಲ್ಯಮಾಪನ) ರಮೇಶ್ ಓಲೇಕಾರ ಅವರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರಿಗೆ ಈ ತಿಂಗಳ 17ರಂದು ಬರೆದಿರುವ ಪತ್ರ (ಸಂಖ್ಯೆ:ವಿಶ್ರೀಕೃವಿಬ/ವಿಸಿಪಿಎಸ್/2023–24/215) ಮತ್ತು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರ (ಸಂಖ್ಯೆ:ವಿಶ್ರೀಕೃವಿಬ/ವಿಸಿಪಿಎಸ್/2023–24/216) ಪತ್ರದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ರಮೇಶ್ ಓಲೇಕಾರ ಅವರನ್ನು ತುರ್ತು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಪತ್ರದ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ರಮೇಶ್ ಓಲೇಕಾರ ಅವರನ್ನು ಮೌಲ್ಯಮಾಪನ ಕುಲಸಚಿವರ ಹುದ್ದೆಗೆ ನಿಯೋಜನೆ ಮೇಲೆ 2022ರ ಮಾರ್ಚ್ 11ರಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಓಲೇಕಾರ ಅದೇ ತಿಂಗಳ 14ರಂದು ಅಧಿಕಾರ ವಹಿಸಿದ್ದು, ಒಂದು ವರ್ಷ 10 ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ತುರ್ತಾಗಿ ಬದಲಾವಣೆ ಮಾಡಬೇಕಾಗಿದೆ ಎಂದು ಈ ಪತ್ರದಲ್ಲಿ ಪ್ರಭಾರ ಕುಲಪತಿ ಪ್ರಸ್ತಾಪಿಸಿದ್ದಾರೆ.
ವಿಎಸ್‌ಕೆಯು 2010ರಲ್ಲಿ ಸ್ಥಾಪನೆಯಾಗಿದ್ದು ಅಂದಿನಿಂದ ಕುಲಸಚಿವರ (ಮೌಲ್ಯಮಾಪನ) ಹುದ್ದೆಗೆ ‘ಯಾವೊಬ್ಬ ಮಹಿಳೆ’ಯೂ ನೇಮಕವಾಗಿಲ್ಲ. ಮಹಿಳೆಯರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಓಲೇಕಾರ ಅವರನ್ನು ಬದಲಾವಣೆ ಮಾಡಿ ಗೌರಿ ಮಾಣಿಕ್ ಮಾನಸ ಅವರನ್ನು ನೇಮಿಸಿ ಆದೇಶ ಹೊರಡಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.