
ಬಳ್ಳಾರಿ: ಬಳ್ಳಾರಿಯಲ್ಲಿ ಇಬ್ಬರು ಶಾಸಕರ ನಡುವೆ ಹಗ್ಗಜಗ್ಗಾಟ ನಡೆದ ಬೆನ್ನಲ್ಲೇ ಈಗ ಶಾಸಕರ ಬೆಂಬಲಿಗರ ನಡುವೆ ಘರ್ಷಣೆಗಳು ಆರಂಭವಾಗಿವೆ. ಜನಾರ್ದನ ರೆಡ್ಡಿ ಆಪ್ತ ಮೆಹಪೂಜ್ ಅಲಿಖಾನ್ ಮತ್ತು ನಾಗೇಂದ್ರ ಆಪ್ತರ ನಡುವೆ ಗಲಾಟೆಗಳು ನಡೆದಿದ್ದು, ನಗರದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿವೆ.
ನಾಗೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾರ್ಪೊರೇಟರ್ ಮೊಹಮದ್ ಆಸಿಫ್ ಬಾಷಾ ಅವರು ನೀಡಿರುವ ದೂರಿನಲ್ಲಿ ಜನಾರ್ದನ ರೆಡ್ಡಿ ಆಪ್ತ ಮೆಹಪೂಜ್ ಅಲಿಖಾನ್ ಎಂಬಾತ, ಜ.30ರಂದು ತನ್ನ 11 ಜನ ಸಹಚರರೊಂದಿಗೆ ತಮ್ಮ ಕಚೇರಿ ಬಳಿಗೆ ಬಂದು ಧಮಕಿ ಹಾಕಿರುವುದಾಗಿಯೂ, ತಮ್ಮ ಕಡೆಯವರಿಗೆ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಲಾಗಿದೆ.
ಇದಾದ ಕೆಲವೇ ಗಂಟೆಗಳಲ್ಲಿ ಮೊಹಪೂಜ್ ಅಲಿಖಾನ್ ಅವರ ಸಹಚರ ಎನ್ನಲಾದ ಬಿ.ಎಂ ನಜೀರ್ ಆಶ್ರಫಿ ಎಂಬಾತನೂ ದೂರು ನೀಡಿದ್ದು, ಕಾರ್ಪೊರೇಟರ್ ಆಸೀಫ್ ತನ್ನ ಬಳಿ ₹1.10 ಕೋಟಿ ಸಾಲ ಪಡೆದಿದ್ದು, ₹70 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಈ ಮಧ್ಯೆ ಜ. 30ರಂದು ಬೆಳಗಲ್ ಕ್ರಾಸ್ ಬಳಿ ಹೋಗುತ್ತಿದ್ದಾಗ ಕಾರ್ಪೊರೇಟರ್ ಆಸಿಫ್ ತನ್ನನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಿದ್ದಾನೆ.
ಈ ಎರಡೂ ದೂರುಗಳ ಆಧಾರದಲ್ಲಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಕಾರ್ಪೊರೇಟರ್ ಆಸೀಫ್ ದೂರಿನ ಆಧಾರದಲ್ಲಿ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ, ನಜೀರ್ ಆಶ್ರಫಿ ನೀಡಿರುವ ದೂರಿನ ಆಧಾರದಲ್ಲಿ ಕಾರ್ಪೊರೇಟರ್ ಆಸೀಫ್ ವಿರುದ್ಧ ಎಫ್‌ಐಆರ್ ಮಾಡಲಾಗಿದೆ.
ಅಲಿಖಾನ್ ವಿರುದ್ಧ ಮೂರು ಎಫ್‌ಐಆರ್’
ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾರ್ಪೊರೇಟರ್ ಆಸೀಫ್ ‘ಹಣದ ವ್ಯವಹಾರ ಇರುವುದು ನಮಗೆ ಹಾಗೂ ಅರುಣಾ ಲಕ್ಷ್ಮಿ (ಜನಾರ್ದನ ರೆಡ್ಡಿ ಪತ್ನಿ) ಅವರಿಗೆ. ಇಲ್ಲಿ ಅಲಿಖಾನ್ ಯಾರು. ಅವರ ಹೆಸರು ಹೇಳಿಕೊಂಡು ಇವರು ಗಲಾಟೆ ಮಾಡುತ್ತಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ನನ್ನ ಹಾಗೂ ನನ್ನ ಕುಟುಂಬವನ್ನು ನಿಂದಿಸಿದ್ದಕ್ಕೆ ಈ ವರೆಗೆ ಅಲಿಖಾನ್ ವಿರುದ್ಧ ನಾನು ಮೂರು ಎಫ್‌ಐಆರ್ ದಾಖಲಿದ್ದೇನೆ’ ಎಂದರು. ಜನಾರ್ದನ ರೆಡ್ಡಿ ಆಪ್ತ ಮೆಹಪೂಜ್ ಅಲಿಖಾನ್ ಮಾತನಾಡಿ ‘2021ರಲ್ಲಿ ಮೇಯರ್ ಚುನಾವಣೆ ನಡೆಯುತ್ತಿತ್ತು. ಮೇಯರ್ ಸ್ಥಾನ ಪಡೆಯಲು ಕಾಂಗ್ರೆಸ್ ನಾಯಕರಿಗೆ ಹಣ ನೀಡಬೇಕಿದೆ ₹2 ಕೋಟಿ ಬೇಕಿದೆ ಎಂದು ಆಸೀಫ್ ನನ್ನ ಬಳಿ ಹೇಳಿದ್ದ. ನಾನು ₹2 ಕೋಟಿ ಕೊಡಿಸಿದ್ದೆ. ಆದರೆ ಆಸಿಫ್ ಮೇಯರ್ ಆಗಲಿಲ್ಲ. ₹1 ಕೋಟಿ ವಾಪಸ್ ನೀಡಿದರು. ಬಾಕಿ ₹1 ಕೋಟಿ ಇತ್ತು. ಇದಾದ ಬಳಿಕವೂ ನಾನು ₹30 ಲಕ್ಷ ಕೊಡಿಸಿದ್ದೆ. ಈಗ ₹70 ಲಕ್ಷ ಬಾಕಿ ಇದೆ. ಹಣ ಪಡೆದುಕೊಂಡು ಹಿಂದಿರುಗಿಸಲು ಆಸೀಫ್ ಸತಾಯಿಸುತ್ತಿದ್ದಾರೆ. ಈಗ ಕೊಟ್ಟ ಹಣ ಕೇಳುತ್ತಿದ್ದೇವೆ. ಯಾವುದೇ ಧಮಕಿ ಹಾಕಿಲ್ಲ. ನಾವೇನು ಜನರನ್ನು ಕಟ್ಟಿಕೊಂಡು ಹೋಗಿಲ್ಲ. ಆಸೀಫ್ ವಿರುದ್ಧ ನಾನು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಅವಹೇಳನ ಮಾಡಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.