ADVERTISEMENT

ಬಳ್ಳಾರಿ | ಕರ್ಬಲಾ ಹುತಾತ್ಮರ ಶೋಕ ಕಥನ ‘ರಿವಾಯತ್‌’

ಗಡಿಭಾಗದ ಅಗಸನೂರಿನ ಮೊಹರಂ: ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 6:32 IST
Last Updated 16 ಜುಲೈ 2024, 6:32 IST
ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದಲ್ಲಿ ಮೊಹರಂ ಆಚರಣೆ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳ ಮುಖ್ಯಸ್ಥರು ಬಣ್ಣ ಬಣ್ಣದ ಧ್ವಜ ಹಿಡಿದು ಮುನ್ನಡೆಯುತ್ತಾರೆ
ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದಲ್ಲಿ ಮೊಹರಂ ಆಚರಣೆ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳ ಮುಖ್ಯಸ್ಥರು ಬಣ್ಣ ಬಣ್ಣದ ಧ್ವಜ ಹಿಡಿದು ಮುನ್ನಡೆಯುತ್ತಾರೆ   

ತೆಕ್ಕಲಕೋಟೆ : ‘ಖಾಸಿಂ ಸಾಹೇಬ ಕದನ ಸಾರುತ್ತಾ ಬಂದರೂ ಪಾಜಾಕ್ಕೆ, ಇದು ಒಂದು ಕೌತುಕ ಮೆರೆಯಲಿಕ್ಕೆ...

7ನೇ ಶತಮಾನದಲ್ಲಿ 'ಯಜೀದ'ನ ಸೈನ್ಯದಿಂದ ಕರ್ಬಲಾ ರಣಾಂಗಣದಲ್ಲಿ ಹುತಾತ್ಮನಾದ 13 ವರ್ಷದ ಬಾಲಕ ಕಾಶಿಮರ ಸ್ಮರಣೆಯೊಂದಿಗೆ ಅಗಸನೂರಿನ ಮೊಹರಂ ಹಾಡುಗಾರರು ಕನ್ನಡ ‘ರಿವಾಯತ್’ ಗಳನ್ನು ಆರಂಭಿಸುತ್ತಾರೆ.

ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದ ಜನರು ಕರ್ಬಲಾ ಯುದ್ಧದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರ ದುರಂತ ಕಥನವನ್ನು ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ವಿವಿಧ ಜಾತಿ, ಲಿಂಗ ಮತ್ತು ವಯೋಮಾನದ ನೂರಾರು ಜನ ಅವರ ಸುತ್ತಲೂ ಸೇರುತ್ತಾರೆ.

ADVERTISEMENT

ಸಭಾ ಸಲಾಂ ಹೋ, ಸಬ್ ದರ್ ಕೋ ಸಲಾಂ

ಕುಂತಿರುವ ದೈವಕ್ಕೆ ನಮ್ಮ ಸಲಾಂ||

ಔರ್ ತಂದೆ ತಾಯಿಗೆ ನಮ್ಮ ಭಕ್ತಿಯ ಸಲಾಂ

ರಸೂಲ್ ಕೋ ಸಲಾಂ, ಅಲಿಮೌಲ ಕೋ ಸಲಾಂ||

ಹೀಗೆ ಕರ್ಬಲಾ ಹುತಾತ್ಮರಿಗೆ ಸಲಾಂ ನುಡಿದು ಗಾಯಕರಾದ ದೋಸೆ ಈರಣ್ಣ (78), ಉಸ್ಮಾನ್ ಅಲಿ (70) ಮತ್ತು ರಾಘವ ರೆಡ್ಡಿ (65) ಇತರರೊಂದಿಗೆ- ದಶಕಗಳಿಂದ ರಿವಾಯತ್ ಗಳನ್ನು ಹಾಡುತ್ತಿದ್ದಾರೆ.

ಮೊಹರಂ ಧರ್ಮಸಾಮರಸ್ಯದ ಪ್ರತೀಕ : ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಕಠಿಣ ನಿಯಮಗಳನ್ನು ಪಾಲಿಸಿಕೊಂಡು ಹಬ್ಬವನ್ನು ಆಚರಿಸುವ ಪದ್ಧತಿ ಇಂದಿಗೂ ನೆಲೆನಿಂತಿದೆ. ಗ್ರಾಮದ ಜನತೆ ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯ ಮಾಂಸ ತ್ಯಜಿಸುತ್ತಾರೆ. ಹೆಂಗಳೆಯರು ಹೂ ಮುಡಿಯುವುದಿಲ್ಲ. ಸತಿಪತಿಯರು ಒಟ್ಟಾಗಿ ಮಲಗುವುದಿಲ್ಲ. ಪಾದರಕ್ಷೆ ಹಾಕುವುದಿಲ್ಲ. ಮನೆಗಳ ಬಾಗಿಲು ಮುಚ್ಚುವುದಿಲ್ಲ ಎಂದರೆ ನಂಬಲೂ ಸಾಧ್ಯವಿಲ್ಲ.

ಏಳನೇ ದಿನ ‘ಹಗಲು ಸರಗಸ್ತಿ’ ಮತ್ತು ಎಂಟನೇ ದಿನದ ರಾತ್ರಿ ಸರಗಸ್ತಿಯ ಆಚರಣೆಯಲ್ಲಿ ಗ್ರಾಮದ ಹಿಂದೂ ದೇವರುಗಳಿಗೆ ಪೀರಲ ದೇವರುಗಳು ತೆರಳಿ ಪೂಜೆ ಸಲ್ಲಿಸುವುದು ಇಂದಿಗೂ ರೂಢಿಯಲ್ಲಿದೆ. ಅಂದು ಭಕ್ತಾದಿಗಳು ಜೋಳದ ಅನ್ನದ ಕಿಚಡಿ, ಬೆಲ್ಲದ ಪಾನಕ ನೈವೇದ್ಯ ಅರ್ಪಿಸುತ್ತಾರೆ.

ಲಿಂಗಾಯತರ ಶರಬಣ್ಣತಾತ ಮುಖ್ಯ ದೇವರನ್ನು ಹೊತ್ತು ಮುಂದಿನ ಮಳೆ ಬೆಳೆಯ ಬಗ್ಗೆ ಹೇಳಿಕೆ ನೀಡುತ್ತಾನೆ. ಪೀರಲ ದೇವರಿಗೆ ಎಲ್ಲಾ ಕಡೆಗೆ ಕೆಂಪು ಸಕ್ಕರೆ ಓದಿಸುವುದು ರೂಢಿ. ಆದರೆ ಇಲ್ಲಿ ಜೋಡಿ ತೆಂಗಿನಕಾಯಿಗಳನ್ನು ಒಡೆಯುವುದು ವಿಶೇಷ. ಹರಕೆ ಹೊತ್ತವರು ತಮ್ಮ ತೂಕದಷ್ಟು ಸಕ್ಕರೆಯನ್ನು ತಕ್ಕಡಿಯಲ್ಲಿ ಕುಳಿತು ತೂಕ ಮಾಡಿ ದೇವರ ಹರಕೆ ತೀರಿಸುತ್ತಾರೆ.

ಅಲಾಯಿ ಕುಣಿತದಲ್ಲಿ ಸಮುದಾಯದ ಮುಖ್ಯಸ್ಥರು ನಿಶಾನಿಗಳಾಗಿ ಬಗೆಬಗೆಯ ಬಣ್ಣದ ಧ್ವಜಗಳನ್ನು ಹಿಡಿದು ಛತ್ರ ಚಾಮರ ಬೀಸುತ್ತಾ ರಾಜ ಮರ್ಯಾದೆಯ ಜಾನಪದ ಶೈಲಿಯಲ್ಲಿ ಸಾಗುವ ದೃಶ್ಯ ರೋಮಾಂಚಕವಾಗಿರುತ್ತದೆ. ಹಿಂದೂ ಜನಾಂಗದ ಯುವಕರು ಫಕೀರ, ಹುಲಿವೇಷ, ಹಳ್ಳಳ್ಳಿ-ಬಿಚೊಳ್ಳಿ ವಿವಿಧ ಬಗೆಯ ವೇಷ ಧರಿಸಿ, ಹಸೇನ್‌-ಹುಸೇನರ ತತ್ವಪದಗಳನ್ನು ಹಾಡುತ್ತಾ ಹಳ್ಳಿಹಳ್ಳಿ ಸಂಚರಿಸಿ ಕಾಣಿಕೆಯ ರೀತಿಯಲ್ಲಿ ಪಡೆದ ವಸ್ತುಗಳನ್ನು ಮಸೀದಿಯ ಅಭಿವೃದ್ಧಿಗೆ ವಿನಿಯೋಗಿಸುವುದು ಇಲ್ಲಿ ಮಾದರಿಯಾಗಿದೆ.

ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದ ಮೊಹರಂ ಆಚರಣೆ ಸಂದರ್ಭದಲ್ಲಿ ರಿವಾಯತ್ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿವ ದೃಶ್ಯ ಆಕರ್ಷಕವಾಗಿರುತ್ತದೆ

ಹಬ್ಬದಲ್ಲಿ ಕಠಿಣ ನಿಯಮ ಆಚರಣೆ ವೀಕ್ಷಣೆಗೆ ರಾಜ್ಯ, ಹೊರರಾಜ್ಯದ ಜನಸಾಗರ ಹಸೇನ್‌-ಹುಸೇನರ ತತ್ವಪದ ಗೀತಗಾಯನ

ಚಂದ್ರದರ್ಶನದ ನಂತರ ಅಲಾಯಿ ಕುಣಿಗೆ ಗುದ್ದಲಿ ಹಾಕಿದ ದಿನದಿಂದ ದೇವರ ವಿಸರ್ಜನೆವರೆಗೆ ಈ ಕಠಿಣ ನಿಯಮ ಪಾಲಿಸುತ್ತೇವೆ

- ಎಂ.ಗೋಪಾಲರೆಡ್ಡಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.