
ಬಳ್ಳಾರಿ: ಅಪೆಂಡಿಸೈಟಿಸ್ ಸಮಸ್ಯೆಯಿಂದ ‘ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ–ಬಿಎಂಸಿಆರ್‌ಸಿ (ವಿಮ್ಸ್)ಗೆ ದಾಖಲಾಗಿದ್ದ 8 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದು, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಆದರೆ, ವೈದ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಬಳ್ಳಾರಿ ನಗರದ ಅಂದ್ರಾಳು ಗ್ರಾಮದ ರವಿ ಮತ್ತು ಶಾಂತ ದಂಪತಿಯ ಮಗ ಅರುಣ್ ಮೃತ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿದ್ದ ವೈದ್ಯರು ಬಾಲಕನಿಗೆ ಅಪೆಂಡಿಸೈಟಿಸ್ ಆಗಿರುವುದಾಗಿ ತಿಳಿಸಿ, ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಿದ್ದರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯನ್ನೂ ಮಾಡಲಾಗಿತ್ತು.
ಆ ಬಳಿಕ ಬಾಲಕನ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಇದಾದ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು ಎನ್ನಲಾಗಿದೆ. ಕೇವಲ 20 ದಿನಗಳ ಅಂತರದಲ್ಲಿ ಬಾಲಕನಿಗೆ 3 ಬಾರಿ ಶಸ್ತ್ರಚಿಕಿತ್ಸೆ ಆಗಿತ್ತು. ವೈದ್ಯರೂ ಏನೋ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿಯೇ ಅರುಣ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ ಪೋಷಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಪರೀಕ್ಷೆಗಳು, ಔಷಧಗಳಿಗೆ ಹೊರಗೆ ಬರೆದುಕೊಡಲಾಗುತ್ತಿದೆ ಎಂದೂ ಕುಟುಂಬಸ್ಥರು ಆರೋಪಿಸಿದರು.
ಅರುಣ್‌ನನ್ನು ಮೊದಲ ಬಾರಿಗೆ ಆಸ್ಪತ್ರೆಗೆ ತಂದಾಗಲೇ ಆತನ ಅಪೆಂಡಿಕ್ಸ್‌ನಲ್ಲಿ ತೀವ್ರ ಕೀವು ತುಂಬಿ, ಒಡೆದು ಹೋಗಿತ್ತು. ಕೀವು ಹೊಟ್ಟೆಯನ್ನು ಆವರಿಸಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಕೀವನ್ನು ಹೊರತೆಗೆಯಲಾಗಿತ್ತು. ಆದರೆ, ಕೀವು ಹೊಟ್ಟೆಯ ಭಾಗದಲ್ಲಿ ಮತ್ತೆ ಕೆಲವು ದಿನಗಳ ಬಳಿಕ ಕಾಣಿಸಿಕೊಂಡಿತ್ತು. ಅದನ್ನು ಲ್ಯಾಪ್ರೊಸ್ಕೋಪಿಕ್ ಮೂಲಕ ಹೊರತೆಗೆದಿದ್ದೆವು. ಇದಾದ ಬಳಿಕ ಬಾಲಕನಲ್ಲಿ ಕರುಳಿನ ಉಬ್ಬರ ಕಾಣಿಸಿಕೊಂಡಿತ್ತು. ಅಷ್ಟುಹೊತ್ತಿಗೆ ನಂಜು ದೇಹ ಆವರಿಸಿತ್ತು. ಹೀಗಾಗಿಯೇ ಬಾಲಕ ಕೊನೆಯುಸಿರೆಳೆದ ಎಂದು ತಜ್ಞ ವೈದ್ಯರು ವಿವರಿಸಿದ್ದಾರೆ.
‘ನಿತ್ಯ 20 ಅಪೆಂಡಿಸೈಟಿಸ್ ಪ್ರಕರಣಗಳನ್ನು ನಾವು ಶಸ್ತ್ರ ಚಿಕಿತ್ಸೆ ಮೂಲಕ ಪಾರು ಮಾಡಿರುತ್ತೇವೆ. ಆದರೆ, ಅಪೆಂಡಿಕ್ಸ್ ಒಡೆದುಹೋಗಿದ್ದರೆ ಅದು ಅತ್ಯಂತ ಕ್ಲಿಷ್ಟ ಪ್ರಕರಣ. ಇದು ಅಂಥದ್ದೇ ಪ್ರಕರಣವಾಗಿತ್ತು. ಬಾಲಕನ ಸಾವು ನಮಗೂ ನೋವು ತರಿಸಿದೆ’ ಎಂದು ವೈದ್ಯರು ತಿಳಿಸಿದ್ದಾರೆ.
ತೀವ್ರ ನಂಜಿನ (ಸೆಪ್ಟಿಕ್ ಶಾಕ್) ಪರಿಣಾಮವಾಗಿ ಬಾಲಕನ ಮೃತ್ಯು ಸಂಭವಿಸಿದೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಇದನ್ನೇ ತಿಳಿಸಿದೆ. ಆದರೂ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗುತ್ತಿದ್ದು ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆಡಾ.ಗಂಗಾಧರ ಗೌಡ ವಿಮ್ಸ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.