ADVERTISEMENT

ಕಲ್ಯಾಣ ಕರ್ನಾಟಕದಲ್ಲಿ 30 ಕ್ಷೇತ್ರ ಗೆಲ್ಲಿಸಿ: ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:40 IST
Last Updated 19 ಆಗಸ್ಟ್ 2021, 13:40 IST
ಸಚಿವ ಭಗವಂತ ಖೂಬಾ ಭಾಷಣದ ಸಾಂದರ್ಭಿಕ ಚಿತ್ರ
ಸಚಿವ ಭಗವಂತ ಖೂಬಾ ಭಾಷಣದ ಸಾಂದರ್ಭಿಕ ಚಿತ್ರ   

ಬಳ್ಳಾರಿ: 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಒಟ್ಟು 39 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 30 ಕ್ಷೇತ್ರಗಳಲ್ಲಾದರೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.

2018ರ ಚುನಾವಣೆಯಲ್ಲಿ ಬಿಜೆಪಿಯು ಕಲ್ಯಾಣ ಕರ್ನಾಟಕದಲ್ಲಿ ಗೆದ್ದಿರುವುದು ಕೇವಲ 14 ಕ್ಷೇತ್ರಗಳನ್ನು ಮಾತ್ರ. ಇದರಿಂದಾಗಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂದು ಅವರು ಬಸವ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಮುಂದಿನ ಚುನಾವಣೆಯಲ್ಲಿ 30 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇ ಆದರೆ ರಾಜ್ಯದಲ್ಲಿ ಬಿಜೆಪಿ ಖಂಡಿತವಾಗಿ 150ಸ್ಥಾನಗಳನ್ನು ಗೆಲ್ಲಲಿದೆ. 2008ರ ಚುನಾವಣೆಯಲ್ಲಿ ಗೆದ್ದಿದ್ದು 110ಸ್ಥಾನ. 2018ರ ಚುನಾವಣೆಯಲ್ಲಿ ಜಯಗಳಿಸಿದ್ದು 104 ಕ್ಷೇತ್ರಗಳಲ್ಲಿ ಮಾತ್ರ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಕೆಲಸ ಮಾಡಿದರೆ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಹುದು ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಅದನ್ನೇ ಬಂಡವಾಳ ಮಾಡಿಕೊಳ್ಳಬೇಕು. ಜನರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಅವರು ಸಲಹೆ ಮಾಡಿದರು.

ಮೋದಿಯವರ ಮುತ್ಸದ್ಧಿತನದಿಂದಾಗಿ ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚು ಸಾವು ಸಂಭವಿಸಲಿಲ್ಲ. ಕೋವಿಡ್‌ ನಿಯಂತ್ರಿಸುವ ಲಸಿಕೆ ಅಭಿಯಾನವನ್ನು ನಮ್ಮಲ್ಲಿ ತ್ವರಿತಗೊಳಿಸಲಾಗಿದೆ. ಇದುವರೆಗೆ 53 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಕೇಂದ್ರ ಸಚಿವ ಸಂಪುಟದಲ್ಲಿ ಎಲ್ಲ ಜಾತಿ, ಜನಾಂಗ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿಯಲಾಗಿದೆ. ರಾಜ್ಯಗಳಿಗೆ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಕೊಡಲಾಗಿದೆ. ಸಂಸತ್ತು ಅನುಮೋದಿಸಿದ ಕೃಷಿ ತಿದ್ದುಪಡಿ ಮಸೂದೆಗಳು ಕ್ರಾಂತಿಯನ್ನೇ ಮಾಡುತ್ತವೆ ಎಂದು ಅವರು ವಿವರಿಸಿದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು, ಜನಾಶೀರ್ವಾದ ಯಾತ್ರೆ ಸಂಚಾಲಕ ಸೋಮಶೇಖರರೆಡ್ಡಿ ಸಭೆಯಲ್ಲಿ ಮಾತನಾಡಿದರು. ಲೋಕಸಭೆ ಸದಸ್ಯ ದೇವೇಂದ್ರಪ್ಪ, ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.