ADVERTISEMENT

ಬಳ್ಳಾರಿ | ಭರತ್ ಬಂಧಿಸಿ, CBIಗೆ ತನಿಖೆ ಒಪ್ಪಿಸಿ: BJP ಮುಖಂಡರ ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:11 IST
Last Updated 17 ಜನವರಿ 2026, 16:11 IST
<div class="paragraphs"><p>ಬಿಜೆಪಿ ಸಮಾವೇಶವನ್ನು ಪಕ್ಷದ ನಾಯಕರು ಡೋಲು ಬಾರಿಸಿ ಮತ್ತು ಕಹಳೆ ಊದುವ ಮೂಲಕ ಉದ್ಘಾಟಿಸಿದರು.</p></div>

ಬಿಜೆಪಿ ಸಮಾವೇಶವನ್ನು ಪಕ್ಷದ ನಾಯಕರು ಡೋಲು ಬಾರಿಸಿ ಮತ್ತು ಕಹಳೆ ಊದುವ ಮೂಲಕ ಉದ್ಘಾಟಿಸಿದರು.

   

ಬಳ್ಳಾರಿ: ‘ಹೊಸ ವರ್ಷದಂದು ಇಲ್ಲಿನ ಅವ್ವಂಬಾವಿಯಲ್ಲಿ ನಡೆದ ಘರ್ಷಣೆ, ಕೊಲೆ ಪ್ರಕರಣದ ಸಂಬಂಧ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್‌ ರೆಡ್ಡಿ ಮತ್ತು ಬೆಂಬಲಿಗರನ್ನು ಬಂಧಿಸಬೇಕು, ಪ್ರಕರಣದ ತನಿಖೆಯನ್ಉ ಸಿಬಿಐಗೆ ವಹಿಸಬೇಕು’ ಇಲ್ಲಿ ನಡೆದ ಬಿಜೆಪಿ ಸಮಾವೇಶ ಆಗ್ರಹಪಡಿಸಿದೆ.

ಬಳ್ಳಾರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕರು, ‘ಗಲಭೆಯಲ್ಲಿ ಶಾಸಕರಿಗೆ ನೆರವಾದ ಪೊಲೀಸ್‌ ಅಧಿಕಾರಿಗಳನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರದ ವಿರುದ್ಧ ಸಮಾವೇಶ ನಡೆಸಿದ್ದೇವೆ. ದೇಶದ್ರೋಹಿಗಳು, ಕೊಲೆಗಡುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ಬಳ್ಳಾರಿ ಗಲಭೆ ಪ್ರಕರಣದ ತನಿಖೆಯು ಸೂಕ್ತ ರೀತಿ‌ಯಲ್ಲಿ ನಡೆಯುತ್ತಿಲ್ಲ.‌ ಪೊಲೀಸ್ ಠಾಣೆಗಳು, ಸರ್ಕಾರಿ ಕಚೇರಿಗಳೂ ಕಾಂಗ್ರೆಸ್‌ ಪಕ್ಷದ ಕಚೇರಿಗಳಾಗಿವೆ. ಪೊಲೀಸರೇ ಕಳ್ಳರಾಗಿದ್ದಾರೆ’ ಎಂದು ನೇರ ವಾಗ್ದಾಳಿ ನಡೆಸಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ವಾಲ್ಮೀಕಿ ಪ್ರತಿಮೆ ಅನಾವರಣ ಕುರಿತಂತೆ ಗಲಭೆ ನಡೆದಿದೆ. ವಾಲ್ಮೀಕಿ ಸಮುದಾಯದವರ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇದೆಯೇ. ಈ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಏರಿಸಿದ್ದೇ ಬಿಜೆಪಿ. ಗುಂಡಿನ ದಾಳಿಯಿಂದ ಮೃತಪಟ್ಟ ರಾಜಶೇಖರ ರೆಡ್ಡಿ ಅವರ ಸಾವಿಗೆ ನ್ಯಾಯ ಕೊಡಿಸುತ್ತೇವೆ. ದಾಳಿ ಮಾಡಿದವರಿಗೆ ಶಿಕ್ಷೆ ಕೊಡಿಸುತ್ತೇವೆ’ ಎಂದರು.

ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ‘ಗಲಭೆ ಬಳಿಕ ಹೆಚ್ಚಿನ ಭದ್ರತೆ ಕೇಳಿದರೆ ‘ವಿದೇಶಗಳಿಂದ ಪಡೆಯಲಿ’ ಎಂದು ಡಿ.ಕೆ ಶಿವಕುಮಾರ್‌ ಹೇಳುತ್ತಾನೆ. ಹಾಗಾದರೆ, ಮತ್ತಿನ್ನೇನು ಕಿಸಿಯಲು ನೀನು ಈ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದೀಯ’ ಎಂದು  ಏಕವಚನದಲ್ಲಿ ಮೂದಲಿಸಿದರು. ಕರ್ನಾಟಕವು ಕಾಂಗ್ರೆಸ್‌ನ ರಿಪಬ್ಲಿಕ್ ಆಗಿದೆ. ‘ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಅನ್ನು ಬೇರು ಸಮೇತ ಕಿತ್ತು ಹಾಕುವೆ’ ಎಂದರು. 

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ‘2028ಕ್ಕೆ ಬಿಜೆಪಿ ಸರ್ಕಾರ ಬರಲಿದೆ. ಫಿನಿಕ್ಸ್‌ನಂತೆ ನಾನೂ ಎದ್ದು ಬರುತ್ತೇನೆ. ಪಾತಾಳದಲ್ಲಿದ್ದರೂ ಭರತ್ ರೆಡ್ಡಿಯನ್ನು ಹುಡುಕಿಸಿ ಶಿಕ್ಷಿಸುತ್ತೇವೆ.‌ ಆಗ ರಕ್ಷಣೆಗೆ ಯಾರು ಬರುತ್ತಾರೆ ನೋಡುತ್ತೇನೆ. ದಾಳಿಗೆ ನೆರವು ನೀಡಿದ ಬಳ್ಳಾರಿ ನಗರ ಡಿವೈಎಸ್‌ಪಿ ನಂದಾರೆಡ್ಡಿ ಮತ್ತು ಎಎಸ್‌ಪಿ ರವಿಕುಮಾರ್‌ ಅವರನ್ನೂ ಶಿಕ್ಷಿಸುತ್ತೇವೆ’ ಎಂದರು.   

ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್‌, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಎಂ.ಪಿ ರೇಣುಕಾಚಾರ್ಯ, ಶಿವನಗೌಡ ನಾಯಕ್‌, ಬಸವರಾಜ ದಡೇಸುಗೂರು ಇದ್ದರು. 

ಬಳ್ಳಾರಿ ಘರ್ಷಣೆ ಖಂಡಿಸಿ ಪಾದಯಾತ್ರೆ ಮಾಡುವ ಬಗ್ಗೆ ಕೇಂದ್ರದ ನಾಯಕರಿಗೆ ಕೋರಲಾಗಿದೆ. ಸೂಚನೆ ನಿರೀಕ್ಷೆಯಲ್ಲಿದ್ದೇವೆ. ಪಾದಯಾತ್ರೆ ಮಾಡಲು ನಾಯಕತ್ವದ ಗೊಂದಲ ಇಲ್ಲ.
ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ

‘ಕೋಪ ಪಾಪದ ಕೂಸು ಭರತ್‌ ರೆಡ್ಡಿ’ 

‘ಬಳ್ಳಾರಿ ನಗರವು ಭಸ್ಮಾಸುರನಿಗೆ ಜನ್ಮನೀಡಿದೆ. ಇದರಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೂ ಒಂದು ಪಾಠವಿದೆ’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.  

‘ನಿಮ್ಮ ನಡುವಿನ ಕೋಪ ಮತ್ತು ಪಾಪದ ಕೂಸು ಭರತ್‌ ರೆಡ್ಡಿ. ಇಂದು ಅದು ನಿಮ್ಮ ಮೇಲೆ ಅಧಿಕಾರ ಸಾಧಿಸುತ್ತಿದೆ. ಕೋಪದಿಂದ ಏನೂ ಸಾಧಿಸಲಾಗದು. ನಿಮ್ಮ ಕೋಪ ಬಿಡಿ. ಶ್ರೀರಾಮುಲು ಸೋಮಶೇಖರ ರೆಡ್ಡಿ ಕರುಣಾಕರ ರೆಡ್ಡಿ ಜನಾರ್ದನ ರೆಡ್ಡಿ ನೀವೆಲ್ಲರೂ ಒಂದಾಗಿರಿ. ಬಳ್ಳಾರಿ ಒಂದು ಕಾಲದಲ್ಲಿ ಬಿಜೆಪಿಮಯವಾಗಿತ್ತು. ನಿಮ್ಮ ಸಣ್ಣ ತಪ್ಪಿನಿಂದ ಕಾಂಗ್ರೆಸ್‌ನ ಪಾಪದ ಕೂಸುಗಳು ಹುಟ್ಟಿಬಂದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಂತ್ರಸ್ತೆ ಗುರುತು ಬಹಿರಂಗಪಡಿಸಿದ ಶ್ರೀರಾಮುಲು 

ಮಾಜಿ ಸಚಿವ ಶ್ರೀರಾಮುಲು ಅವರು ಭಾಷಣದಲ್ಲಿ ಪೋಕ್ಸೊ ಸಂತ್ರಸ್ತೆಯೊಬ್ಬರ ಗುರುತು ಬಹಿರಂಗ ಪಡಿಸಿದರು. ‘ಭರತ್‌ ರೆಡ್ಡಿ ಯುವಕರನ್ನು ಯಾವ ಹಂತಕ್ಕೆ ಮಾದಕ ವ್ಯಸನಿಗಳನ್ನಾಗಿ ಮಾಡಿದ್ದಾರೆ ಎಂದರೆ ನಾಲ್ಕೈದು ಮಂದಿ ಡ್ರಗ್ಸ್‌ ತೆಗೆದುಕೊಂಡು ನಗರದ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದರು. ಮಾತಿನ ಭರದಲ್ಲಿ ಅವರು ವಿದ್ಯಾರ್ಥಿನಿಯ ವಿವರ ಸೇರಿ ಇತರ ವಿಷಯಗಳನ್ನು ಬಹಿರಂಗಪಡಿಸಿದರು.

₹10 ಲಕ್ಷ ಪರಿಹಾರ

ಸಮಾವೇಶಕ್ಕೂ  ಮೊದಲು ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಮನೆಗೆ ಭೇಟಿ ನೀಡಿದ ಬಿಜೆಪಿ ನಾಯಕರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಾಜಶೇಖರ ತಾಯಿಗೆ ಗಾಲಿ ಅರುಣಾ ಲಕ್ಷ್ಮೀ ಅವರು ₹10 ಲಕ್ಷ ಅರ್ಥಿಕ ನೆರವಿನ ಚೆಕ್ ನೀಡಿದರು. 

‘ಜನಾರ್ದನ ರೆಡ್ಡಿ ದೊಡ್ಡ ಮನಸ್ಸು ತೋರಬೇಕಿತ್ತು’

ಹುಬ್ಬಳ್ಳಿ: ‘ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆಯಿತು. ಜನಾರ್ದನ ರೆಡ್ಡಿ ಅವರು ದೊಡ್ಡ ಮನಸ್ಸು ಮಾಡಿ ಬ್ಯಾನರ್‌ ಕಟ್ಟಲು ಅವಕಾಶ ಮಾಡಿಕೊಟ್ಟಿದ್ದರೆ ಗಲಾಟೆ ಆಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಪಾದಯಾತ್ರೆ ಮಾಡಿದ್ದೆವು. ಈಗ ಬಿಜೆಪಿಯವರು ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಾರೆ’ ಎಂದು ಸಚಿವ ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.