ADVERTISEMENT

ಜನಾರ್ದನ ರೆಡ್ಡಿ ಆಪ್ತನ ಮೇಲೆ ಹಲ್ಲೆ: ರಾಜಕೀಯ ದಾಳಿ ಶಂಕೆ

ಸುಡುಗಾಡಿಗೆ ಎಳೆದೊಯ್ದ, ಬಟ್ಟೆ ಹರಿದು ಥಳಿಸಿರುವ ಆರೋಪ| 7 ಜನರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:31 IST
Last Updated 1 ಆಗಸ್ಟ್ 2025, 5:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬಳ್ಳಾರಿ: ಜನಾರ್ದನ ರೆಡ್ಡಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಆಚಾರಿ ಎಂಬುವವರ ಮೇಲೆ ಮಂಗಳವಾರ ಹಲ್ಲೆ ನಡೆದಿದ್ದು, ರಾಜಕೀಯ ದಾಳಿಯ ಶಂಕೆ ವ್ಯಕ್ತವಾಗಿದೆ. 

ಹಲ್ಲೆಗೆ ಒಳಗಾಗಿ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ  ಪಡೆಯುತ್ತಿದ್ದ ಮಲ್ಲಿಕಾರ್ಜುನ ಬಳ್ಳಾರಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅದರ ಆಧಾರದಲ್ಲಿ ರಾಮು ಮತ್ತು ಇತರ ಆರು ಅನಾಮಿಕರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. 

ADVERTISEMENT

ಮಲ್ಲಿಕಾರ್ಜುನ ಅವರನ್ನು ನಗರದ ಹೊರವಲಯದ ವಾಜಪೇಯಿ ಬಡಾವಣೆ ಸಮೀಪದ ಸುಡುಗಾಡೊಂದಕ್ಕೆ ಕರೆದೊಯ್ದು, ಬಟ್ಟೆ ಹರಿದು ಹಲ್ಲೆ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

‘ಒಂದೊಂದು ಬಾರಿ ಜನಾರ್ದನ ರೆಡ್ಡಿ ಪರವಾಗಿ ಪೋಸ್ಟ್‌ ಹಾಕುತ್ತೀಯಾ, ಒಂದೊಂದು ಬಾರಿ ಕಾಂಗ್ರೆಸ್‌ ಬಗ್ಗೆ ಹಾಕುತ್ತೀಯ, ಮತ್ತೊಂದು ಬಾರಿ ಕಾಂಗ್ರೆಸ್‌ ವಿರುದ್ಧ ಪೋಸ್ಟ್‌ ಹಾಕುತ್ತೀಯ’ ಎಂದು ಹೇಳಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಹೀಗಾಗಿ ಇದು ರಾಜಕೀಯ ಪ್ರೇರಿತ ಹಲ್ಲೆ ಎಂಬ ಶಂಕೆ ವ್ಯಕ್ತವಾಗಿದೆ. 

ಆಡಿಯೊಗೂ ಹಲ್ಲೆಗೂ ಸಂಬಂಧ?: ಮಲ್ಲಿಕಾರ್ಜುನ್‌ ಅವರದ್ದು ಎನ್ನಲಾದ ಆಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಧ್ವನಿಮುದ್ರಿಕೆಗೂ ಹಲ್ಲೆಗೂ ಸಂಬಂಧಿರುವುದಾಗಿ ಬಳ್ಳಾರಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. 

ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಅವರ ಜ್ಯೂನಿಯರ್‌ ಸಿನಿಮಾ ಯಶಸ್ಸು ಕಾಣಬಾರದು ಎಂದು ಅವನು (ರಾಜಕೀಯ ನಾಯಕ) ಎಕ್ಕ ಸಿನಿಮಾಕ್ಕೆ ಬೆಂಬಲ ನೀಡಿದ್ದಾನೆ. ಅದಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ನಾನು ಅವನಿಗೆ ಮೆಸೇಜ್‌ ಹಾಕಿದ್ದೇನೆ ನಿನಗೇನು ತೊಂದರೆ ಎಂದು ಆ ಆಡಿಯೊದಲ್ಲಿ ಕೇಳಿ ಬರುತ್ತದೆ. 

ಆಡಿಯೊದಲ್ಲಿ ಶಾಸಕರೊಬ್ಬರ ಹೆಸರು ಪ್ರಸ್ತಾಪವಾಗಿರುವುದಕ್ಕೂ, ಹಲ್ಲೆ ನಡೆದಿರುವುದಕ್ಕೂ ನಂಟಿರುವುದಾಗಿ ಬಿಜೆಪಿ ನಾಯಕರೂ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಬಿಜೆಪಿಯಲ್ಲಿ ಚರ್ಚೆಗೂ ಕಾರಣವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.