ADVERTISEMENT

ಬಳ್ಳಾರಿಯ ವಿಜಯನಗರದಲ್ಲಿ ಬಿಜೆಪಿ, ಜೆಡಿಎಸ್‌ ಶಕ್ತಿ ಪ್ರದರ್ಶನ: ಕಾಂಗ್ರೆಸ್‌ ಸರಳ

ಆನಂದ್‌ ಸಿಂಗ್‌, ಎನ್‌.ಎಂ. ನಬಿ ಹಾಗೂ ವೆಂಕಟರಾವ ಘೋರ್ಪಡೆ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 15:11 IST
Last Updated 18 ನವೆಂಬರ್ 2019, 15:11 IST
ನಾಮಪತ್ರ ಸಲ್ಲಿಸುವ ವೇಳೆ ಎದುರು ಬದುರಾದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಬಸವರಾಜ ರಾಯರಡ್ಡಿ ಅವರು ಪರಸ್ಪರ ಹಸ್ತಲಾಘವ ಮಾಡಿದರು
ನಾಮಪತ್ರ ಸಲ್ಲಿಸುವ ವೇಳೆ ಎದುರು ಬದುರಾದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಬಸವರಾಜ ರಾಯರಡ್ಡಿ ಅವರು ಪರಸ್ಪರ ಹಸ್ತಲಾಘವ ಮಾಡಿದರು   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಸೋಮವಾರ ಬಿಜೆಪಿ ಹಾಗೂ ಜೆ.ಡಿ.ಎಸ್‌. ಅಭ್ಯರ್ಥಿಗಳು ನಗರದಲ್ಲಿ ಶಕ್ತಿ ಪ್ರದರ್ಶನದೊಂದಿಗೆ ಉಮೇದುವಾರಿಕೆ ಸಲ್ಲಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಸರಳವಾಗಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಮೆರವಣಿಗೆಯಲ್ಲಿ ಚಕ್ಕಡಿಯಲ್ಲಿ ಬಂದು ಗಮನ ಸೆಳೆದರು. ಶಾಸಕ ರಾಜುಗೌಡ ಎತ್ತಿನ ಬಂಡಿ ಓಡಿಸಿದರು. ಮೆರವಣಿಗೆಗಾಗಿಯೇ ಚಕ್ಕಡಿಯನ್ನು ವಿಶಾಖಪಟ್ಟಣಂದಿಂದ ತರಿಸಿದ್ದರು. ನಗರದ ವಡಕರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಮೂರಂಗಡಿ ವೃತ್ತ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತದ ಮೂಲಕ ಹಾದು ಸಂಡೂರು ರಸ್ತೆಯಲ್ಲಿನ ಚುನಾವಣಾಧಿಕಾರಿ ಕಚೇರಿ ತಲುಪಿದರು.

ಸಿಂಗ್‌ ಅವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಹಾಲಪ್ಪ ಆಚಾರ್‌, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಸಾಥ್‌ ನೀಡಿದರು. ವಿಶೇಷ ರೀತಿಯಲ್ಲಿ ಅಲಂಕರಿಸಿದ ‘ವಿಜಯನಗರದ ವಿಜಯರಥ’ ತೆರೆದ ವಾಹನದಲ್ಲಿ ನಿಂತುಕೊಂಡು ಮುಖಂಡರು ಜನರತ್ತ ಕೈಬೀಸಿದರು.

ADVERTISEMENT

ಮೆರವಣಿಗೆಯಲ್ಲಿ ಹಗಲುವೇಷಧಾರಿಗಳು, ಕಹಳೆ, ಬಿಜೆಪಿ ಚಿಹ್ನೆ ಹೊಂದಿರುವ ಟೋಪಿಗಳು, ಮರಗೋಲು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಆಕಾಶದಲ್ಲಿ ಪಕ್ಷದ ಚಿಹ್ನೆಯ ಬಲೂನ್‌ಗಳನ್ನು ತೇಲಿಬಿಡಲಾಯಿತು.

ಇನ್ನೂ ಜೆ.ಡಿ.ಎಸ್‌. ಅಭ್ಯರ್ಥಿ ಎನ್‌.ಎಂ. ನಬಿ ಅವರು ತೆರೆದ ವಾಹನದಲ್ಲಿ ಪಕ್ಷದ ಮುಖಂಡರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ನಗರದ ಹಂಪಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಆರಂಭವಾದ ಮೆರವಣಿಗೆಯು ಮಹಾತ್ಮ ಗಾಂಧಿ ವೃತ್ತ, ಮೂರಂಗಡಿ ಮಸೀದಿ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತದಿಂದ ನೇರವಾಗಿ ಚುನಾವಣಾಧಿಕಾರಿ ಕಚೇರಿಗೆ ತೆರಳಿದರು. ಅವರಿಗೆ ಪಕ್ಷದ ನೂರಾರು ಕಾರ್ಯಕರ್ತರು ಸಾಥ್‌ ನೀಡಿದರು. ಎಲ್ಲೆಲ್ಲೂ ತೆನೆಹೊತ್ತ ಮಹಿಳೆ ಚಿಹ್ನೆ ಇರುವ ಧ್ವಜಗಳು ರಾರಾಜಿಸಿದವು.

ಜೆ.ಡಿ.ಎಸ್‌. ಮುಖಂಡರಾದ ಪಿಂಜಾರ ಬಾಲೇ ಸಾಬ್‌, ಕೊಟ್ರೇಶ್‌, ಖಾಜಾ ಹುಸೇನ್‌ ನಿಯಾಜಿ ಸೇರಿದಂತೆ ಇತರೆ ಮುಖಂಡರು ಸಾಥ್‌ ನೀಡಿದರು. ಕಾಂಗ್ರೆಸ್‌ ಪಕ್ಷದ ವೆಂಕಟರಾವ ಘೋರ್ಪಡೆ ಅವರು ಸರಳವಾಗಿ ನಾಮಪತ್ರ ಸಲ್ಲಿಸಿದರು. ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿ, ಉಮೇದುವಾರಿಕೆ ಸಲ್ಲಿಸಿದರು.

ಇದಕ್ಕೂ ಮುನ್ನ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರ ಕೆಲವು ಬೆಂಬಲಿಗರು ಬೇಸರ ತೋಡಿಕೊಂಡರು. ಅವರನ್ನು ಸಮಾಧಾನಪಡಿಸಿ, ಮೆರವಣಿಗೆಯಲ್ಲಿ ಅವರನ್ನು ಕರೆದೊಯ್ದರು. ನಿಯಾಜಿಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ಭಾನುವಾರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಅವರಿಗೆ ಶಾಸಕರಾದ ಜೆ.ಎನ್‌. ಗಣೇಶ್‌, ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಮುಖಂಡರಾದ ನಾರಾ ಸೂರ್ಯನಾರಾಯಣ ರೆಡ್ಡಿ, ಬಸವರಾಜ ರಾಯರಡ್ಡಿ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ, ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ್‌ ನಾಗರಾಜ, ನಿಂಬಗಲ್‌ ರಾಮಕೃಷ್ಣ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.