ADVERTISEMENT

ಬಿಎಸ್‌ವೈ ಕೊಟ್ಟ ಮಾತು ಈಡೇರಿಸಲಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:30 IST
Last Updated 21 ಜನವರಿ 2021, 13:30 IST
ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆ ಗುರುವಾರ ಹೊಸಪೇಟೆ ಹೊರವಲಯದ ಮೂಲಕ ಮುಂದೆ ತೆರಳಿತು
ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆ ಗುರುವಾರ ಹೊಸಪೇಟೆ ಹೊರವಲಯದ ಮೂಲಕ ಮುಂದೆ ತೆರಳಿತು   

ಹೊಸಪೇಟೆ: ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮಾಜದವರು ಕೈಗೊಂಡಿರುವ ಪಾದಯಾತ್ರೆಗೆ ಗುರುವಾರ ನಗರ ಹೊರವಲಯದ ಮುನಿರಾಬಾದ್‌ ಕ್ರಾಸ್‌ ಬಳಿ ಸ್ಥಳೀಯರು ಸ್ವಾಗತ ಕೋರಿ ಬರಮಾಡಿಕೊಂಡರು.

ಜ. 14ರಂದು ಕೂಡಲಸಂಗಮದಿಂದ ಆರಂಭಗೊಂಡಿರುವ ಪಾದಯಾತ್ರೆ ಬುಧವಾರ ಕೊಪ್ಪಳದ ಹುಲಿಗಿ ತಲುಪಿತ್ತು. ಗುರುವಾರ ಬೆಳಿಗ್ಗೆ ಅಲ್ಲಿಂದ ಪ್ರಾರಂಭಗೊಂಡ ಪಾದಯಾತ್ರೆ ಮಧ್ಯಾಹ್ನ ನಗರ ಹೊರವಲಯದ ಗುಂಡಾ ಸಸ್ಯ ಉದ್ಯಾನ ಬಂದು ಸೇರಿತು. ಅವರಿಗೆ ಸಮಾಜದ ಮುಖಂಡರಾದ ವಿಜಯಾನಂದ ಕಾಶಪ್ಪನವರ, ಅಮರೇಶ ಕರಡಿ, ರವಿಕಾಂತ ಪಾಟೀಲ, ನಾಗನಗೌಡ, ಮಾವಿನಹಳ್ಳಿ ಬಸವರಾಜ, ಶಿವಾನಂದ, ವೀರೇಶ ಸೇರಿದಂತೆ ಹಲವರು ಸಾಥ್‌ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕೊಟ್ಟ ಮಾತು ಈಡೇರಿಸಬೇಕು. ಪಂಚಮಸಾಲಿಗಳಿಂದ ಬಿಜೆಪಿಯ ಹೆಚ್ಚಿನ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಸಮಾಜವು ಮಂತ್ರಿ ಸ್ಥಾನ, ಮಠ ಕಟ್ಟಿಕೊಡುವಂತೆ ಬೇಡಿಕೆ ಇಟ್ಟಿಲ್ಲ. ರಾಜಕೀಯ, ಆರ್ಥಿಕ ಮೀಸಲಾತಿಯೂ ಕೇಳುತ್ತಿಲ್ಲ. ಉದ್ಯೋಗ, ಶಿಕ್ಷಣಕ್ಕೆ ಸಂಬಂಧಿಸಿ ಮೀಸಲಾತಿ ಕೇಳಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಎಂಟು ಜನ ಲಿಂಗಾಯತ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಅನೇಕ ದಶಕಗಳಿಂದ ಈ ಹೋರಾಟ ನಡೆಯುತ್ತಿದೆ. ಆದರೆ, ಯಾರೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಯಡಿಯೂರಪ್ಪನವರಿಗೆ ಈಗ ಒಳ್ಳೆಯ ಅವಕಾಶ. ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಂಡು ಆದಷ್ಟು ಶೀಘ್ರ ನಮ್ಮ ಬೇಡಿಕೆ ಈಡೇರಿಸಬೇಕು. ನಮ್ಮ ತಾಳ್ಮೆ, ಸಹನೆ ಇನ್ನಷ್ಟು ಪರೀಕ್ಷಿಸುವುದು ಬೇಡ’ ಎಂದು ಎಚ್ಚರಿಸಿದರು.

‘ಪಂಚಮಸಾಲಿಗಳ ಹೋರಾಟ 2ಎ ಮೀಸಲಾತಿಗಷ್ಟೇ ಸೀಮಿತವಾಗಿದೆ. ಅಖಂಡ ಲಿಂಗಾಯತ ಧರ್ಮೀಯರ ಹೋರಾಟ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವುದಕ್ಕಾಗಿ. ಪಂಚಮಸಾಲಿ ಸಮಾಜಕ್ಕೆ ಸೇರಿದ ಎರಡು ಮಠಗಳ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಮೀಸಲಾತಿ ಹೋರಾಟಕ್ಕೆ ಹರಿಹರ ಪೀಠದ ಬೆಂಬಲವೂ ಇದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮುಖಂಡ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಧರಣಿ ಸತ್ಯಾಗ್ರಹ, ಉಪವಾಸ, ರಕ್ತದಾನ ಚಳವಳಿ ಮಾಡಲಾಗಿದೆ. ಈಗ ಪಾದಯಾತ್ರೆ ನಡೆಸಲಾಗುತ್ತಿದೆ. ಇಷ್ಟಾದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಇರುವುದು ಸರಿಯಲ್ಲ. ಈ ಸಲ ತಾರ್ಕಿಕ ಅಂತ್ಯ ಕಾಣುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಮಾಜಕ್ಕೆ ಸೇರಿದ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.