ADVERTISEMENT

ಮನಸೂರೆಗೊಂಡ ತೊಗಲು ಗೊಂಬೆಯ ಬುದ್ಧ!

‘ಬೋಧಿಸತ್ಯ’ ಪ್ರದರ್ಶನ ವೀಕ್ಷಿಸಿದ ನೂರಾರು ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 15:48 IST
Last Updated 11 ಆಗಸ್ಟ್ 2019, 15:48 IST
‘ಬೋಧಿಸತ್ಯ’ ರೂಪಕದ ದೃಶ್ಯ
‘ಬೋಧಿಸತ್ಯ’ ರೂಪಕದ ದೃಶ್ಯ   

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡರ ರಂಗಮಂದಿರದಲ್ಲಿ ಶನಿವಾರ ರಾತ್ರಿ ತೊಗಲುಗೊಂಬೆಗಳು ಬುದ್ಧನ ಜೀವನದ ಕತೆಯನ್ನು ಕಳೆಗಟ್ಟಿಸಿದವು.

ಪ್ರೊ.ಪ್ರಭುಶಂಕರರ ‘ಬುದ್ಧ ನಾಟಕ ಚಕ್ರ’ದ ನಾಲ್ಕು ಪ್ರಸಂಗಗಳನ್ನು ಆಧರಿಸಿ ಲೇಖಕರಾದ ಶ್ರೀಕಾಂತ ತಾಮ್ರಪರ್ಣಿ, ಎ.ಎಂ.ಜಯಶ್ರೀ ಹಾಗೂ ಬೆಳಗಲ್ಲು ಪ್ರಕಾಶ ರಚಿಸಿದ ರೂಪಕ ‘ಬೋಧಿಸತ್ಯ: ತೊಗಲುಗೊಂಬೆಯಾಟದಲ್ಲಿಬುದ್ಧ’ ಅದ್ಭುತ ದೃಶ್ಯಕಾವ್ಯವಾಗಿ ಮೂಡಿಬಂತು.

ಹಾಡು, ಸಂಗೀತ, ವೀಡಿಯೋಗಳಲ್ಲಿ ಮೂಡಿದ ಸುಮಧುರ ಗೀತ ಗಾಯನ, ಸುಲಲಿತ ಸಂಭಾಷಣೆಗೆ ತಕ್ಕಂತೆ ಆಡಿದ ತೊಗಲುಗೊಂಬೆಗಳು ಬುದ್ಧ ಜೀವನಾಮೃತದ ರೂಪಕವನ್ನು ಪ್ರೇಕ್ಷಕರ ಮನಮುಟ್ಟಿಸಿದವು.

ADVERTISEMENT

ಪ್ರಾಚೀನ ಜಾನಪದ ಕಲೆಯಾದ ತೊಗಲುಗೊಂಬೆಯಾಟವು ಆಧುನಿಕ ಶೈಲಿಯ ನೃತ್ಯ- ಸಂಗೀತ, ಹಿತಮಿತವಾದ ವಿನೂತನ ಸೆಲ್ಯುಲಾಯ್ಡ್ ತಂತ್ರಜ್ಞಾನಕ್ಕೆ ಕಳಸವಿಟ್ಟಂತೆ ಸಮಯೋಚಿತ ಸಂಭಾಷಣೆ, ಸುಶ್ರಾವ್ಯ ಹಾಡುಗಾರಿಕೆಯೊಂದಿಗೆಬುದ್ಧನ ಅಗಾಧ ಜೀವನತತ್ವವನ್ನು ವಿಶಿಷ್ಟ ಮಾದರಿಯಲ್ಲಿ ನಿರೂಪಿಸಿತು.

ಲೇಖಕರಾದ ವೆಂಕಟಯ್ಯ ಅಪ್ಪಗೆರೆ, ಗಂಗಾಧರ ಪತ್ತಾರ ಸೇರಿದಂತೆ ಹದಿನಾರು ಪ್ರಬುದ್ಧರ ಕಂಠದಾನ, ವಿ.ಟಿ.ಕಾಳೆ, ರಘುನಾಥ್ ಹವಾಲ್ದಾರರ ಅಂದದ ರೇಖಾಚಿತ್ರಗಳು, ಅವನ್ನು ಪಾರದರ್ಶಕ ವರ್ಣರಂಜಿತ ತೊಗಲುಗೊಂಬೆಗಳಾಗಿ ರೂಪಿಸಿದ ಬೆಳಗಲ್ಲು ಮಲ್ಲಿಕಾರ್ಜುನ, ಮಾರುತಿ, ಸುದರ್ಶನ ಅವರೊಂದಿಗೆ ಕೆ.ಎಂ.ಶಶಿಧರ್, ರವಿ ಹಡಗಲಿಯವರ ಜೊತೆ ಆಲಾಪಿಸುವುದರೊಂದಿಗೆ ಸಂಗೀತ ಸಂಯೋಜಿಸಿದ ಬೆಳಗಲ್ಲು ಪ್ರಕಾಶ ಪ್ರದರ್ಶನಕ್ಕೆ ಮೆರುಗು ತಂದರು. ಇಡೀ ರೂಪಕವನ್ನು ನಿರ್ದೇಶಿಸಿದವರು ಬೆಳಗಲ್ಲು ವೀರಣ್ಣನವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಪ್ರಬಂಧಕಾರ ಈರಪ್ಪ ಎಂ.ಕಂಬಳಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಭಾರತೀಯ ಬೌದ್ಧ ಮಹಾಸಭಾದ ಪ್ರಮುಖರಾದ ಮಲ್ಲಿಕಾರ್ಜುನ ಬಾಲ್ಕೆ ಹಾಗೂ ಎನ್.ಡಿ.ವೆಂಕಮ್ಮ, ನಿವೃತ್ತ ಅಧಿಕಾರಿ ಕೆ.ಎನ್.ಶಿವಶಂಕರ್, ಕಲಾವಿದೆ ಶಿವಕುಮಾರಿ ಉಪಸ್ಥಿತರಿದ್ದರು. ಕೇಂದ್ರದ ಸಂಸ್ಕೃತಿ ಸಚಿವಾಲಯದ ಸಹಕಾರದಲ್ಲಿ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.