ADVERTISEMENT

ರಾಜ್ಯ ಬಜೆಟ್‌ ಪ್ರತಿಕ್ರಿಯೆಗಳು...

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 15:15 IST
Last Updated 8 ಮಾರ್ಚ್ 2021, 15:15 IST
ಮಂಜುನಾಥ ಅಂಚಿ
ಮಂಜುನಾಥ ಅಂಚಿ   

ಸಾಲ ಮನ್ನಾ ಪ್ರಸ್ತಾಪವೇ ಇಲ್ಲ

ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಅದರ ಬಗ್ಗೆ ಚಕಾರ ಎತ್ತಿಲ್ಲ. ಅವರ ಹಸಿರು ಶಾಲು ತೋರ್ಪಡಿಕೆಗೆ ಸೀಮಿತವಾಗಿದೆ. ರೈತರ ಬಗ್ಗೆ ನೈಜ ಕಾಳಜಿ ಇಲ್ಲ.
-ಅಂಚಿ ಮಂಜುನಾಥ, ರೈತ ಮುಖಂಡ, ಹೂವಿನಹಡಗಲಿ.

ಆಶಾದಾಯಕ ಬಜೆಟ್‌

ADVERTISEMENT

ಲಾಕ್‌ಡೌನ್‌ನಿಂದ ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನಸಾಮಾನ್ಯರ ಮೇಲೆ ತೆರಿಗೆಯ ಭಾರ ಹಾಕದೆ ಬಜೆಟ್‌ ಮಂಡಿಸಿರುವುದು ಉತ್ತಮ. ಮಹಿಳೆಯರ ಕಲ್ಯಾಣಕ್ಕೆ ಒತ್ತು ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಒಟ್ಟಾರೆ ಆಶಾದಾಯಕ ಬಜೆಟ್‌ ಇದೆ.
-ಸವಿತಾ ಅಂಗಡಿ, ಗೃಹಿಣಿ, ಹೂವಿನಹಡಗಲಿ.

ಕಳಪೆ ಬಜೆಟ್

ಈ ಬಾರಿಯ ಬಜೆಟ್ ರಾಜ್ಯದ ಕೂಲಿಕಾರರಿಗೆ, ದಲಿತರಿಗೆ, ಮಹಿಳೆಯರಿಗೆ, ಬಡವರಿಗೆ ಯಾರಿಗೂ ಆಶಾದಾಯಕವಾಗಿಲ್ಲ. ಯಾವುದೇ ಸ್ತರದವರಿಗೂ ಉಪಯೋಗವಾಗಿಲ್ಲ. ಇದೊಂದು ದಿಕ್ಕಿಲ್ಲದ ಬಜೆಟ್. ಆದಿ ಇಲ್ಲ, ಅಂತ್ಯ ಇಲ್ಲ. ಒಟ್ಟಾರೆ ಅತ್ಯಂತ ಕಳಪೆ ಬಜೆಟ್ ಇದು.
-ಬಿ.ಮಾಳಮ್ಮ, ಸಂಚಾಲಕಿ, ದಲಿತ ಮಹಿಳೆಯರ ಹಕ್ಕುಗಳ ಸಮಿತಿ, ಹಗರಿಬೊಮ್ಮನಹಳ್ಳಿ.

ಮಠ ಮಾನ್ಯಗಳಿಗೆ ಅನುದಾನ

ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದೇ ಇರುವುದು ಆರ್ಥಿಕ ಪ್ರಗತಿಗೆ ಹಿನ್ನಡೆ ಆಗಲಿದೆ. ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಎಂಎಸ್‍ಎಂಇಗಳು ಇವೆ. ಇವುಗಳಿಂದ ಆರ್ಥಿಕ ಮತ್ತು ದೇಶಿಯ ಉತ್ಪಾದನೆ ವ್ಯವಸ್ಥೆ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿ ಆಗುತ್ತಿತ್ತು. ಕೇವಲ ಧರ್ಮಗಳನ್ನು ಓಲೈಸಲು ಮಠ ಮಾನ್ಯಗಳಿಗೆ ಅನುದಾನ ನೀಡಲಾಗಿದೆ.
-ಪ್ರೊ. ಹರಾಳು ಬುಳ್ಳಪ್ಪ, ಅರ್ಥಶಾಸ್ತ್ರ ಪ್ರಾಧ್ಯಾಪಕ, ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ.

ಕನ್ನಡ ವಿರೋಧಿ ಬಜೆಟ್‌

ಮರಾಠಿ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ₹50 ಕೋಟಿ ಕೊಡಲಾಗಿದೆ. ಲಿಂಗಾಯತರು, ಒಕ್ಕಲಿಗ ಸಮುದಾಯಕ್ಕೆ ಅನುದಾನ ಘೋಷಿಸಲಾಗಿದೆ. ಆದರೆ, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಕನ್ನಡ ವಿಶ್ವವಿದ್ಯಾಲಯವನ್ನು ಕಡೆಗಣಿಸಿರುವುದು ಖಂಡನಾರ್ಹ. ಕನ್ನಡ ವಿರೋಧಿ ಬಜೆಟ್‌.
–ಮುನಿರಾಜು, ವಿದ್ಯಾರ್ಥಿ ಮುಖಂಡ

ಶಿಕ್ಷಣ ಕ್ಷೇತ್ರದ ಕಡೆಗಣನೆ

ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅನುದಾನ ಕಡಿಮೆ ಮಾಡಲಾಗಿದೆ. ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಡುವುದರ ಬದಲು ಜ್ಞಾನ ಬೆಳೆಸುವ ವಿಶ್ವವಿದ್ಯಾಲಯಗಳಿಗೆ ಅನುದಾನ ಕೊಡಬಹುದಿತ್ತು. ಇದು ಗೊತ್ತು ಗುರಿ ಇಲ್ಲದ ಬಜೆಟ್‌.
–ಎಂ. ರಾಗಿಣಿ, ಸಂಶೋಧನಾ ವಿದ್ಯಾರ್ಥಿ

ಮಹಿಳಾ ಪರ ಬಜೆಟ್‌

ಮಹಿಳೆಯರ ಪರ ಬಜೆಟ್‌ ಮಂಡಿಸಿರುವುದು ಸ್ವಾಗತಾರ್ಹ. ಎಲ್ಲ ಯೋಜನೆಗಳು ಕಾಗದದಲ್ಲಿ ಉಳಿಯದೇ ಅನುಷ್ಠಾನಕ್ಕೆ ಬರಬೇಕು. ಆಗ ಬಜೆಟ್‌, ಮಹಿಳಾ ದಿನಾಚರಣೆಗೂ ಅರ್ಥ ಬರುತ್ತದೆ.
–ನಿರ್ಮಲ ಶಿವನಗುತ್ತಿ,ಕೊಟ್ಟೂರು

ರೈತರಿಗೇನೂ ಇಲ್ಲ

ರೈತರ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಯೋಜನೆಗಳನ್ನು ಘೋಷಿಸಬಹುದಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ರೈತರಿಗೇನೂ ಕೊಟ್ಟಿಲ್ಲ.
–ನಾಗರಾಜ, ರೈತ, ಮಂಗಾಪುರ

ಸಂಕಷ್ಟದಲ್ಲೂ ಉತ್ತಮ ಬಜೆಟ್‌

ರಾಜ್ಯ ಬಜೆಟ್ ಜನಪರವಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ರಾಜ್ಯದ ಜನರಿಗೆ ಉತ್ತಮ ಬಜೆಟ್ ನೀಡಿದ್ದಾರೆ. ಜನಸಾಮಾನ್ಯರ ಮೇಲೆ ಹೊರೆ ಹಾಕಿಲ್ಲ.
–ವಿರೇಶ್ ಕಿಟ್ಟಪ್ಪನವರ್, ಕಾನಹೊಸಹಳ್ಳಿ

ಉತ್ತಮ ಬಜೆಟ್‌

ಕೋವಿಡ್‌ನಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಕ್ಕೆ ಉತ್ತಮ ಬಜೆಟ್ ನೀಡಿದ್ದಾರೆ. ಬಜೆಟ್‌ನಲ್ಲಿರುವ ಘೋಷಣೆ ಜಾರಿಗೆ ಬರಬೇಕು.
–ಎ.ಎಂ. ವಾಗೀಶ ಮೂರ್ತಿ, ಕೂಡ್ಲಿಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.