ADVERTISEMENT

ಸಿದ್ದರಾಮೋತ್ಸವಕ್ಕೆ ಬಸ್‌: ಸಾರಿಗೆ ವ್ಯವಸ್ಥೆ ಇಲ್ಲದೆ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 5:18 IST
Last Updated 4 ಆಗಸ್ಟ್ 2022, 5:18 IST
ಹೊಸಪೇಟೆ ಬಸ್‌ ನಿಲ್ದಾಣದಿಂದ ಬುಧವಾರ ಬೆರಳೆಣಿಕೆ ಸಂಖ್ಯೆಯ ಬಸ್‌ಗಳು ಸಂಚರಿಸಿದ್ದರಿಂದ ಪ್ರಯಾಣಿಕರು ಬಸ್‌ಗಳಿಗೆ ಕಾದು ಕಾದು ಸುಸ್ತಾದರು-ಪ್ರಜಾವಾಣಿ ಚಿತ್ರ
ಹೊಸಪೇಟೆ ಬಸ್‌ ನಿಲ್ದಾಣದಿಂದ ಬುಧವಾರ ಬೆರಳೆಣಿಕೆ ಸಂಖ್ಯೆಯ ಬಸ್‌ಗಳು ಸಂಚರಿಸಿದ್ದರಿಂದ ಪ್ರಯಾಣಿಕರು ಬಸ್‌ಗಳಿಗೆ ಕಾದು ಕಾದು ಸುಸ್ತಾದರು-ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದಿಂದ ಹೆಚ್ಚಿನ ಬಸ್‌ಗಳು ಕರಾರು ಒಪ್ಪಂದದ ಮೇರೆಗೆ ದಾವಣಗೆರೆಯ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಬುಧವಾರ ಸಾರ್ವಜನಿಕರು ಪರದಾಟ ನಡೆಸಿದರು.

ಹೊಸಪೇಟೆ ವಿಭಾಗದ ಒಟ್ಟು 430 ಬಸ್‌ಗಳ ಪೈಕಿ 200 ಬಸ್‌ಗಳು ದಾವಣಗೆರೆಗೆ ತೆರಳಿದ್ದವು. ಒಟ್ಟು ಬಸ್‌ಗಳಲ್ಲಿ ಅರ್ಧ ಬಸ್‌ಗಳು ಅಲ್ಲಿಗೆ ಹೋಗಿದ್ದವು. ಜಿಲ್ಲೆಯ ವಿವಿಧ ಬಸ್‌ ನಿಲ್ದಾಣಗಳಿಂದ ಬೇರೆ ಬೇರೆ ಕಡೆಗಳಿಗೆ ಸಂಚರಿಸಬೇಕಿದ್ದ ಬಸ್‌ಗಳ ಕೊರತೆಯಾಗಿದ್ದರಿಂದ ದೈನಂದಿನ ಕೆಲಸಗಳಿಗೆ ಹೋಗುವವರಿಗೆ ಸಮಸ್ಯೆ ಉಂಟಾಗಿತ್ತು.

ಬೆಳಿಗ್ಗೆ ಕಚೇರಿಯ ಸಮಯ, ಇತರೆ ಕೆಲಸಗಳಿಗೆ ಹೋಗಬೇಕಿದ್ದವರು, ಸಂಜೆ ಮನೆಗೆ ಮರಳಬೇಕಿದ್ದವರು ತಡಹೊತ್ತು ಬಸ್‌ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದರು. ಆಗೊಮ್ಮೆ ಬಿಟ್ಟು ಬಿಟ್ಟು ಒಂದೊಂದೆ ಬಸ್‌ಗಳು ಬರುತ್ತಿದ್ದವು. ಬಸ್‌ಗಳು ನಿಲ್ದಾಣದೊಳಗೆ ಬರುತ್ತಿದ್ದಂತೆ ಜನ ನೊಣಗಳಂತೆ ಮುತ್ತಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರದ ಕಾರಣ ಸಾರ್ವಜನಿಕರು ಆಟೊ, ಟಂಟಂ, ಕ್ರೂಸರ್‌ ಹಾಗೂ ಬೈಕ್‌ಗಳಲ್ಲಿ ಸಂಚರಿಸಿದರು.

ADVERTISEMENT

ಸಿದ್ದರಾಮೋತ್ಸವಕ್ಕೆ ಒಪ್ಪಂದದ ಮೇರೆಗೆ ಬಸ್‌ಗಳನ್ನು ಕಳಿಸಿರುವುದರಿಂದ ಆ. 3 ಮತ್ತು 4ರಂದು ಬಸ್‌ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.