ಸಂಡೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಂಡೂರು ಪಟ್ಟಣಕ್ಕೆ ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಪತ್ರ ಬರೆಯಲಾಗಿದೆ.
ಸಂಡೂರು ಪಟ್ಟಣಕ್ಕೆ ರಾತ್ರಿ ನಿಗದಿತ ಸಮಯದ ನಂತರ ಬಸ್‌ಗಳ ಓಡಾಟ ಇರುವುದಿಲ್ಲ. ಕೂಡ್ಲಿಗಿಯಿಂದ ಸಂಡೂರಿಗೆ ರಾತ್ರಿ 8.30 ಕ್ಕೆ, ಹೊಸಪೇಟೆಯಿಂದ 9 ಗಂಟೆಗೆ, ಬಳ್ಳಾರಿಯಿಂದ 8.30 ಕ್ಕೆ ಬಸ್ ಸಂಚಾರ ಕೊನೆಯಾಗುತ್ತದೆ.
ಸಂಡೂರಿಗೆ ಕೊನೆ ಬಸ್ ತಪ್ಪಿದ ನಂತರ ವೃದ್ದರು, ಅಂಗವಿಕಲರು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಪರಿತಪಿಸಬೇಕಾಗುತ್ತದೆ. ಕುಡುಕರ ಕಾಟ, ಸೊಳ್ಳೆಗಳ ಹಾವಳಿ, ಚಳಿ, ಗಾಳಿ, ಮಳೆಯೆನ್ನದೆ ನಡುರಸ್ತೆಯಲ್ಲೇ ನಿಂತು ಖಾಸಗಿ ವಾಹನಗಳಿಗೆ ಅವಲಂಬಿಸಬೇಕು. ಪ್ರಾಯದ ಹೆಣ್ಣು ಮಕ್ಕಳು, ಹಾಲುಣಿಸುವ ತಾಯಂದಿರು, ಗರ್ಭಿಣಿಯರು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದ ರೋಗಿಗಳು ಹೆಚ್ಚಿನ ದುಡ್ಡು ಕೊಟ್ಟು ಊರು ಸೇರಬೇಕು ಇಲ್ಲವೇ ಬಸ್ ನಿಲ್ದಾಣಗಳಲ್ಲಿ ಮಲಗಬೇಕಾದ ದುಸ್ಥಿತಿ ಇದೆ.
ಶ್ರೀಮಂತ ತಾಲ್ಲೂಕು ಎಂದು ಹೇಳಲಾಗುವ ಜನರು ಸಾರಿಗೆ ವ್ಯವಸ್ಥೆಯಿಲ್ಲದೆ ಭಿಕಾರಿಗಳಂತೆ ಕಾಯುವುದು ತಾಲ್ಲೂಕಿನ ಜನತೆಗೆ ಮಾಡುವ ಅವಮಾನವಾಗಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ಇಲಾಖೆಯಿಂದ ಬಸ್ ಸಂಚಾರದಲ್ಲಿ ಬದಲಾವಣೆ ಮಾಡಿದರೂ ಅರ್ಧ ಪರಿಹಾರ ದೊರೆತಂತೆ. ಇದಕ್ಕಾಗಿ ಕೂಡ್ಲಿಗಿಯಿಂದ ರಾತ್ರಿ 9 ರ ನಂತರ ಹೊಸಪೇಟೆಗೆ ತೆರಳುವ ಬಸ್ ನ್ನು ಸಂಡೂರು ಮಾರ್ಗವಾಗಿ , ಹೊಸಪೇಟೆಯಿಂದ ಕೂಡ್ಲಿಗಿಗೆ ತೆರಳುವ ಬಸ್ ಗಳನ್ನು ಸಂಡೂರು ಮೂಲಕ ಹಾಗೂ ಬಳ್ಳಾರಿಯಿಂದ ಹೊಸಪೇಟೆಗೆ ತೆರಳುವ ಬಸ್ ಗಳನ್ನು ಸಂಡೂರಿಗೆ ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
15 ದಿನಗಳ ಒಳಗಾಗಿ ಈ ಸಮಸ್ಯೆಗೆ ಪರಿಹಾರವಾಗಿ ಬಸ್ ಸಂಚಾರದಲ್ಲಿ ಬದಲಾವಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದಿದ್ದಲ್ಲಿ ಸಂಡೂರು ಡಿಪೋಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.