ADVERTISEMENT

ಮತಯಂತ್ರದ ಚಿತ್ರ ತೆಗೆದವ ಅಂದರ್‌

ಚುನಾವಣಾ ಹೆಚ್ಚುವರಿ ಸಿಬ್ಬಂದಿ ಸಾವು; ಹಕ್ಕು ಚಲಾಯಿಸಿ ಜೀವ ತೊರೆದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 14:28 IST
Last Updated 3 ನವೆಂಬರ್ 2018, 14:28 IST
ಹೊಸಪೇಟೆಯ ಮತಗಟ್ಟೆ ಸಂಖ್ಯೆ 62ರಲ್ಲಿ ಛಾಯಾಚಿತ್ರ ತೆಗೆಯಲು ಹೋದ ಇಬ್ರಾಹಿಂ ರಜಾಕ್‌ನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌
ಹೊಸಪೇಟೆಯ ಮತಗಟ್ಟೆ ಸಂಖ್ಯೆ 62ರಲ್ಲಿ ಛಾಯಾಚಿತ್ರ ತೆಗೆಯಲು ಹೋದ ಇಬ್ರಾಹಿಂ ರಜಾಕ್‌ನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌   

ಹೊಸಪೇಟೆ: ಮತಗಟ್ಟೆಯಲ್ಲಿ ಮತಯಂತ್ರದ ಛಾಯಾಚಿತ್ರ ತೆಗೆದ ಯುವಕ ಅಂದರ್‌. ಚುನಾವಣಾ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿಯಾಗಿ ನೇಮಕಗೊಂಡಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದರೆ, ವ್ಯಕ್ತಿಯೊಬ್ಬರು ಮತ ಚಲಾಯಿಸಿದ ನಂತರ ನಿಧನರಾದರು.

ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಶನಿವಾರ ನಡೆದ ಮತದಾನ ದಿನದ ಪ್ರಮುಖ ಘಟನಾವಳಿಗಳು.

ನಗರದ ಮತಗಟ್ಟೆ ಸಂಖ್ಯೆ 62ರಲ್ಲಿ ಮತ ಹಾಕಿದ ಇಬ್ರಾಹಿಂ ರಜಾಕ್‌, ನಂತರ ಮತಯಂತ್ರ ಹಾಗೂ ವಿ.ವಿ.ಪ್ಯಾಟ್‌ನಲ್ಲಿ ಮುದ್ರಿತ ಚೀಟಿಯ ಛಾಯಾಚಿತ್ರ ತೆಗೆಯಲು ಪ್ರಯತ್ನಿಸಿದಾಗ ಮತಗಟ್ಟೆ ಅಧಿಕಾರಿ ಅವರನ್ನು ತಡೆದು ಪೊಲೀಸ್‌ ವಶಕ್ಕೆ ಒಪ್ಪಿಸಿದರು.

ADVERTISEMENT

‘ಇಬ್ರಾಹಿಂನನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 128 ಮತ್ತು 132ರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಶಕ್ಕೆ ಪಡೆಯಲಾಗಿದೆ’ ಎಂದು ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೃದಯಾಘಾತಕ್ಕೆ ಶಿಕ್ಷಕ ಸಾವು:ಚುನಾವಣಾ ಕರ್ತವ್ಯಕ್ಕೆ ಇಲ್ಲಿನ ಆಕಾಶವಾಣಿ ಬಡಾವಣೆಯ 132 (ಎ) ಮತಗಟ್ಟೆಗೆ ಹೆಚ್ಚುವರಿ ಸಿಬ್ಬಂದಿಯಾಗಿ ನೇಮಕಗೊಂಡಿದ್ದ ಕುರುಗೋಡಿನ ವೈ.ಎಂ. ಮಂಜುನಾಥ (50) ಶನಿವಾರ ನಸುಕಿನ ಜಾವ ನಾಲ್ಕು ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದರು.

‘ಶುಕ್ರವಾರ ಮಧ್ಯಾಹ್ನವೇ ಅವರು ಅನಾರೋಗ್ಯಕ್ಕೀಡಾಗಿದ್ದರು. ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮನೆಗೆ ಕಳಿಸಲಾಗಿತ್ತು. ಅವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ, ಮಗ ಹಾಗೂ ಮಗಳು ಇದ್ದಾರೆ’ ಎಂದು ಪಿ.ಎನ್‌. ಲೋಕೇಶ್‌ ತಿಳಿಸಿದರು.

ಹಕ್ಕು ಚಲಾಯಿಸಿ ಜೀವ ಬಿಟ್ಟರು:ಇಲ್ಲಿನ ಅನಂತಶಯನಗುಡಿಯ ಮತಗಟ್ಟೆ ಸಂಖ್ಯೆ 22ರಲ್ಲಿ ಹಕ್ಕು ಚಲಾಯಿಸಿದ ನಂತರ ಬಂಡಿ ನಾರಾಯಣಪ್ಪ (70) ಜೀವ ಬಿಟ್ಟರು. ‘ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮತ ಹಾಕಿದ ನಂತರ ಮನೆಗೆ ಹೋದರು. ಅಲ್ಲೇ ಕೆಲಹೊತ್ತಿನ ನಂತರ ಜೀವ ಬಿಟ್ಟರು’ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದರು.

ಶಾಸಕ ಆನಂದ್‌ ಸಿಂಗ್‌ ಅವರು ನಗರದ ಮತಗಟ್ಟೆ ಸಂಖ್ಯೆ 17ರಲ್ಲಿ ಕುಟುಂಬ ಸದಸ್ಯರೊಂದಿಗೆ ಬಂದು ಹಕ್ಕು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.