ADVERTISEMENT

ರೈತರ ವಿರೋಧದ ನಡುವೆ ಕಾಲುವೆ ನವೀಕರಣ

ಆಗ ಎಚ್‌ಎಲ್‌ಸಿ, ಈಗ ಎಲ್‌ಎಲ್‌ಸಿ ಸರದಿ; ಮೇಲ್ನೋಟಕ್ಕೆ ಕಾಲುವೆ ಸ್ವರೂಪ ಬದಲು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಜೂನ್ 2019, 19:45 IST
Last Updated 13 ಜೂನ್ 2019, 19:45 IST
ಹೊಸಪೇಟೆ ರೈಲು ನಿಲ್ದಾಣ ರಸ್ತೆ ಬಳಿ ಎಲ್‌.ಎಲ್‌.ಸಿ.ಯನ್ನು ಈ ಹಿಂದಿಗಿಂತ ಅಗಲ ಮಾಡಿ ನವೀಕರಣ ಮಾಡುತ್ತಿರುವುದು
ಹೊಸಪೇಟೆ ರೈಲು ನಿಲ್ದಾಣ ರಸ್ತೆ ಬಳಿ ಎಲ್‌.ಎಲ್‌.ಸಿ.ಯನ್ನು ಈ ಹಿಂದಿಗಿಂತ ಅಗಲ ಮಾಡಿ ನವೀಕರಣ ಮಾಡುತ್ತಿರುವುದು   

ಹೊಸಪೇಟೆ: ರೈತರ ತೀವ್ರ ವಿರೋಧದ ನಡುವೆಯೂ ಇಲ್ಲಿನ ತುಂಗಭದ್ರಾಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ.) ನವೀಕರಣ ಕೆಲಸ ಮುಂದುವರೆದಿದೆ.

’ಕಾಲುವೆಗಳ ಮೂಲ ಚಹರೆ ಬದಲಿಸಿ, ಅವೈಜ್ಞಾನಿಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಆರಂಭಿಸುವುದಕ್ಕೂ ಮುನ್ನ ಸೌಜನ್ಯಕ್ಕಾದರೂ ರೈತರ ಸಭೆ ಕರೆದು ಸಲಹೆ ತೆಗೆದುಕೊಳ್ಳಬೇಕಿತ್ತು. ಆದರೆ, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಏಕಪಕ್ಷೀಯವಾಗಿ ಕಾಮಗಾರಿ ಕೈಗೆತ್ತಿಕೊಂಡಿದೆ‘ ಎನ್ನುವುದು ರೈತರ ಆರೋಪವಾಗಿದೆ.

ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ’ಪ್ರಜಾವಾಣಿ‘ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರೈತರು ಮಾಡುತ್ತಿರುವ ಆರೋಪ ಮೇಲ್ನೋಟಕ್ಕೆ ವಾಸ್ತವ ಎಂಬುದು ಕಂಡು ಬಂತು.

ADVERTISEMENT

ನಗರದ ರೈಲು ನಿಲ್ದಾಣದಿಂದ ತಾಲ್ಲೂಕಿನ ನಾಗೇನಹಳ್ಳಿ ವರೆಗೆ ಎಲ್‌.ಎಲ್‌.ಸಿ. ನವೀಕರಣ ಕೆಲಸ ಭರದಿಂದ ನಡೆದಿದೆ. ಜೆ.ಸಿ.ಬಿ., ಟಿಪ್ಪರ್‌ಗಳು ಸೇರಿದಂತೆ ಅನೇಕ ಜನ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 88 ಮುದ್ಲಾಪುರ ಬಳಿಯ ರೈಲ್ವೆ ಕ್ರಾಸಿಂಗ್‌ನಿಂದ ಹಾದು ಹೋಗಿರುವ ಕಾಲುವೆಯ ಸ್ವರೂಪ ಸಂಪೂರ್ಣ ಬದಲಾಗಿರುವುದು ಕಂಡು ಬಂತು.

ವರ್ತುಲ ರಸ್ತೆ ಬದಿಯಲ್ಲಿ ಎಲ್‌.ಎಲ್‌.ಸಿ.ಯ ಒಂದು ಅಂಚಿನಲ್ಲಿ ದೊಡ್ಡ ವಾಹನಗಳು ಹಾದು ಹೋಗುವಷ್ಟು ವಿಶಾಲ ಜಾಗವಿತ್ತು. ಈಗ ಅದು ಸಂಪೂರ್ಣ ಮಾಯವಾಗಿದೆ. ಈ ಹಿಂದೆ ಖಾಲಿ ಇದ್ದ ಜಾಗದ ವರೆಗೆ ಕಾಲುವೆಯನ್ನು ವಿಸ್ತರಿಸಿರುವುದೇ ಅದಕ್ಕೆ ಕಾರಣ.

ಈ ಕುರಿತು ತುಂಗಭದ್ರಾ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ’ಯಾವುದೇ ಬದಲಾವಣೆ ಮಾಡಿಲ್ಲ. ಮೊದಲಿದ್ದ ಕಾಲುವೆಗೆ ಹೊಸ ರೂಪ ಕೊಡಲಾಗುತ್ತಿದೆ‘ ಎಂದು ತಿಳಿಸಿದರು. ಆದರೆ, ಅಧಿಕಾರಿಗಳ ವಾದವನ್ನು ರೈತರು ಒಪ್ಪುತ್ತಿಲ್ಲ. ಕಾಲುವೆಯ ಮೂಲ ವಿನ್ಯಾಸ ಬದಲಾವಣೆ ಮಾಡುವುದರಿಂದ ಭವಿಷ್ಯದ ದಿನಗಳಲ್ಲಿ ಸ್ಥಳೀಯ ರೈತರಿಗೆ ಬಹಳ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

’ಕಾಲುವೆ ಅಭಿವೃದ್ಧಿ ಪಡಿಸುತ್ತಿರುವುದು ಒಳ್ಳೆಯ ವಿಷಯ. ಹಾಗಂತ ಅದರ ಮೂಲ ವಿನ್ಯಾಸ ಬದಲಿಸುವುದು ಸರಿಯಲ್ಲ. ಈ ಹಿಂದೆ ಕಾಲುವೆ ನೋಡಿದ ಯಾರಾದರೂ ಈಗ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರೆ ಬದಲಾವಣೆ ಮಾಡಿರುವುದು ಗೊತ್ತಾಗುತ್ತದೆ. ಅದಕ್ಕೆ ವಿಶೇಷ ಜ್ಞಾನದ ಅಗತ್ಯವಿಲ್ಲ‘ ಎನ್ನುತ್ತಾರೆ ರೈತ ಮುಖಂಡ ನಾರಾಯಣ ರೆಡ್ಡಿ.

’ಈ ಹಿಂದೆ ಎಲ್‌.ಎಲ್‌.ಸಿ. ಮೂಲಕ 1,620 ಕ್ಯುಸೆಕ್‌ ನೀರು ಹರಿಯುತ್ತಿತ್ತು. ಅದನ್ನು ಮಾರ್ಪಾಡು ಮಾಡಿರುವುದರಿಂದ 2,500 ಕ್ಯುಸೆಕ್‌ ವರೆಗೆ ನೀರು ಹರಿಸಬಹುದು. ಹೋದ ವರ್ಷ ಎಚ್‌.ಎಲ್‌.ಸಿ. ಕೂಡ ಹಾಗೆಯೇ ಮಾಡಿದ್ದಾರೆ. 3,200 ಕ್ಯುಸೆಕ್‌ನಿಂದ 4,200 ಕ್ಯುಸೆಕ್‌ ನೀರು ಹರಿಯುವಷ್ಟು ಅದರ ಅಗಲ ವಿಸ್ತರಿಸಿದ್ದಾರೆ. ಅಷ್ಟೇ ಅಲ್ಲ, ಕಾಲುವೆಯಲ್ಲಿ ಸಿಮೆಂಟ್‌ ಬೆಡ್‌ ಹಾಕಿದ್ದಾರೆ. ಇದರಿಂದ ನೀರು ವೇಗವಾಗಿ ಹರಿದು ಹೋಗುತ್ತದೆ‘ ಎಂದರು.

’ಜಲಾಶಯದ ನೀರು ಆಂಧ್ರ ಪ್ರದೇಶ ಹಾಗೂ ರಾಜ್ಯದ ಜನತೆಗೆ ಸಿಗಬೇಕು ಎಂಬ ಉದ್ದೇಶದಿಂದ ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ, ತುಂಗಭದ್ರಾ ಮಂಡಳಿಯವರು ಆಂಧ್ರದವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಾಲುವೆಗಳ ಮೂಲ ಸ್ವರೂಪ ಬದಲಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ನೀರು ವೇಗವಾಗಿ ಕೊನೆಯ ಭಾಗಕ್ಕೆ ಹರಿದು ಹೋಗುತ್ತದೆ. ತೂಬುಗಳಲ್ಲಿ ನೀರು ಹರಿಯದಂತೆ ಮಾಡುತ್ತಿದ್ದಾರೆ. ಕೂಡಲೇ ಕೆಲಸ ನಿಲ್ಲಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು‘ ಎಂದು ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.