ADVERTISEMENT

ಎರಡೇ ದಿನದಲ್ಲಿ ಕಳ್ಳತನ ಪ್ರಕರಣಬೇಧಿಸಿದ ಬಡಾವಣೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಮೇ 2019, 14:37 IST
Last Updated 28 ಮೇ 2019, 14:37 IST

ಹೊಸಪೇಟೆ: ಕಳುವು ಪ್ರಕರಣವನ್ನು ಎರಡೇ ದಿನಗಳಲ್ಲಿ ಇಲ್ಲಿನ ಬಡಾವಣೆ ಠಾಣೆ ಪೊಲೀಸರು ಬೇಧಿಸಿ, ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಎಂ.ಜೆ. ನಗರದ ಲಕ್ಷ್ಮಿಪತಿ (ಲಚ್ಚಿ) ಎಂದು ಗುರುತಿಸಲಾಗಿದೆ. ಲಕ್ಷ್ಮಿಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಪ್ಪರದಹಳ್ಳಿಯಲ್ಲಿ ಭಾನುವಾರ (ಮೇ. 26) ರಾತ್ರಿ ಅಶುದಾ ಬೇಗಂ ಎಂಬುವರ ಮನೆಗೆ ಕನ್ನ ಹಾಕಿದ್ದ ಲಕ್ಷ್ಮಿಪತಿ, ಅವರ ಮನೆಯಲ್ಲಿದ್ದ ₹9,300 ನಗದು, ಸಾವಿರ ರೂಪಾಯಿ ಬೆಲೆಬಾಳುವ ಮೈಕ್ರೊಮ್ಯಾಕ್ಸ್‌ ಮೊಬೈಲ್‌ ಕದೊಯ್ದಿದ್ದ. ಬೇಗಂ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಮಂಗಳವಾರ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಬೇಸಿಗೆ ಇರುವುದರಿಂದ ಅಶುದಾ ಬೇಗಂ ಹಾಗೂ ಅವರ ಕುಟುಂಬ ಸದಸ್ಯರು ಮನೆಯ ಮಹಡಿ ಮೇಲೆ ಮಲಗಿದ್ದರು. ಆದರೆ, ಮನೆಯ ಬಾಗಿಲು ಮತ್ತು ಅಲ್ಮೇರಾಗೆ ಬೀಗ ಹಾಕಿರಲಿಲ್ಲ. ಈ ವಿಷಯ ಅರಿತಿದ್ದ ಲಕ್ಷ್ಮಿಪತಿ ಭಾನುವಾರ ರಾತ್ರಿ ಕೈಚಳಕ ತೋರಿಸಿದ್ದಾನೆ’ ಎಂದು ಎ.ಎಸ್‌.ಐ. ಬಷೀರ್‌ ಮಿಯಾ ತಿಳಿಸಿದರು.

ಎ.ಎಸ್‌.ಐ.ಗಳಾದ ಬಷೀರ್‌ ಮಿಯಾ, ರಾಮಪ್ಪ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಸಾಂಬಯ್ಯ, ಮೋತಿ ನಾಯಕ, ಸುರೇಶ, ಪೇದೆಗಳಾದ ನಾಗರಾಜ ಬಂಡಿಮೇಗಳ, ಪ್ರಕಾಶ, ಕೊಟ್ರೇಶ ಅವರನ್ನು ಒಳಗೊಂಡ ತಂಡವು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡಿಗೆ ಬಿದ್ದು ಬಾಲಕ ಸಾವು:

ನಗರದ ಹೊರವಲಯದ ಸಂಕ್ಲಾಪುರದಲ್ಲಿ ಹನುಮಂತ (14) ಎಂಬ ಬಾಲಕ ಒಳಚರಂಡಿ ನಿರ್ಮಾಣಕ್ಕಾಗಿ ತೋಡಲಾಗಿದ್ದ ಗುಂಡಿಗೆ ಬಿದ್ದು ಮಂಗಳವಾರ ಮೃತಪಟ್ಟಿದ್ದಾನೆ.

‘ಬಾಲಕ ಮಧ್ಯಾಹ್ನ ಚೆಂಡಾಟವಾಡುತ್ತಿದ್ದ. ಚೆಂಡು ಗುಂಡಿಯಲ್ಲಿ ಬಿದ್ದಿದ್ದೆ. ಅದನ್ನು ತೆಗೆದುಕೊಳ್ಳಲು ಗುಂಡಿಗೆ ಜಿಗಿದಿದ್ದಾನೆ. ಈ ವೇಳೆ ಅಲ್ಲಿದ್ದ ಕಬ್ಬಿಣದ ರಾಡುಗಳು, ಕಲ್ಲು ಬಡಿದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಎಂಟನೇ ತರಗತಿಯಲ್ಲಿ ಓದುತ್ತಿದ್ದ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.