ಬಳ್ಳಾರಿ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ಜಾತಿಗಳ ಎದುರು ‘ಕ್ರೈಸ್ತ’ ಎಂದು ಸೇರಿಸಿರುವುದಕ್ಕೆ ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ ಆಕ್ಷೇಪಿಸಿದೆ.
ನಗರದ ಹೊಟೇಲ್‌ವೊಂದರಲ್ಲಿ ಶುಕ್ರವಾರ ವೇದಿಕೆಯ ದುಂಡು ಮೇಜಿನ ಸಭೆ ನಡೆಯಿತು. ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಮಾತನಾಡಿ ‘ ಹಿಂದುಳಿದ ವರ್ಗಗಗಳ ಆಯೋಗವು ಕಳೆದ ತಿಂಗಳು ಪತ್ರಿಕೆಯಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಇದರಲ್ಲಿ 1,500 ಜಾತಿಗಳ ಹೆಸರನ್ನು ಉಲ್ಲೇಖಿಸಿ ಆಕ್ಷೇಪಣೆ ಕರೆದಿದೆ. ಆದರೆ, 50ಕ್ಕೂ ಹೆಚ್ಚು ಜಾತಿಗಳ ಮುಂದೆ ಕ್ರೈಸ್ತ ಎಂದು ಸೇರಿಸಲಾಗಿದೆ. ಇದು ಕ್ರೈಸ್ತರನ್ನು ಹಿಂದು ಧರ್ಮದ ಒಳಗೆ ಸೇರಿಸುವ ಹುನ್ನಾರ’ ಎಂದು ಅವರು ಆರೋಪಿಸಿದರು.
‘ಜಾತಿಗಳನ್ನು ಒಡೆಯುವ ಉದ್ದೇಶದಿಂದ ಸರ್ಕಾರವು ಜಾತಿಗಳ ಪಕ್ಕದಲ್ಲಿ ‘ಕ್ರೈಸ್ತ’ ಎಂದು ಸೇರ್ಪಡೆ ಮಾಡುತ್ತಿದೆ’ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಆರೋಪಿಸಿದರು.
ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜಾತಿ ಒಡೆಯುವ ಕೆಲಸ ಮಾಡುತ್ತದೆ. ಇದನ್ನು ಜನರು ಒಪ್ಪುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಹಲವು ಸಮುದಾಯಗಳ ಮುಂದೆ ಕ್ರೈಸ್ತ ಪದ ಸೇರಿಸಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಮುಂದಿನ ಸೋಮವಾರ ರಾಜ್ಯದಾದ್ಯಂತ ಎಲ್ಲಾ ಸಮುದಾಯದ ಮುಖಂಡರು ಸಾಮಾಜಿಕ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ವಿವಿಧ ಸಮುದಾಯದ ಮುಖಂಡರು, ಹಿಂದುತ್ವ ಪರ ಕಾರ್ಯಕರ್ತರು, ಬಿಜೆಪಿ ಮುಖಂಡರು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.