ADVERTISEMENT

ಬರ: ಅ.7ರಂದು ಸಂಡೂರು ತಾಲ್ಲೂಕಿಗೆ ಕೇಂದ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 16:07 IST
Last Updated 5 ಅಕ್ಟೋಬರ್ 2023, 16:07 IST
<div class="paragraphs"><p>ಬರ (ಪ್ರಾತಿನಿಧಿಕ ಚಿತ್ರ)</p></div>

ಬರ (ಪ್ರಾತಿನಿಧಿಕ ಚಿತ್ರ)

   

ಬಳ್ಳಾರಿ: ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಶನಿವಾರ ಆಗಮಿಸುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ಅವರ ನೇತೃತ್ವದ ಅಂತರ್‌ ಸಚಿವಾಲಯದ ಮೂವರು ಅಧಿಕಾರಿಗಳ ತಂಡ, ಅ.7ರಂದು ಸಂಡೂರು ತಾಲ್ಲೂಕಿನಲ್ಲಿ ಪ್ರವಾಸ ಮಾಡಲಿದೆ.

ಕೇಂದ್ರ ಪಶು ಸಂಗೋಪನಾ ಇಲಾಖೆ ನಿರ್ದೇಶಕ ವಿ.ಆರ್‌. ಠಾಕ್ರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಮೋತಿ ರಾಂ ತಂಡದಲ್ಲಿದ್ದು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ (ಕಂದಾಯ) ಕರೀಗೌಡ ಜತೆಗಿರಲಿದ್ದಾರೆ.

ADVERTISEMENT

ವಿಜಯನಗರ ಜಿಲ್ಲೆ ಕೂಡ್ಲಿಗಿ ನಿರೀಕ್ಷಣಾ ಬಂಗಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ, ಕೇಂದ್ರ ತಂಡಕ್ಕೆ ಮಧ್ಯಾಹ್ನ 2.10ರಿಂದ 2.30ರವರೆಗೆ ಬರಗಾಲ ಪರಿಸ್ಥಿತಿ ಕುರಿತು ಮಾಹಿತಿ ನೀಡಲಿದ್ದಾರೆ. ಬಳಿಕ 2.50ಕ್ಕೆ ತಂಡ 13 ಕಿ.ಮೀ ದೂರದಲ್ಲಿರುವ ಸೋವೇನಹಳ್ಳಿಯಲ್ಲಿ ಹಾನಿಗೊಳಗಾದ ಮೆಕ್ಕೆಜೋಳದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ, ರೈತರೊಂದಿಗೆ ಸಂವಾದ ನಡೆಸಲಿದೆ.

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಅಮೃತ ಸರೋವರ ಕೆರೆ ಹೂಳೆತ್ತುವ ಕಾಮಗಾರಿ ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ ಕಾಮಗಾರಿಗಳನ್ನು ಕೇಂದ್ರ ತಂಡ ವೀಕ್ಷಿಸಲಿದೆ.

ಸೋವೇನಹಳ್ಳಿಯಿಂದ 6 ಕಿ.ಮೀ. ದೂರದಲ್ಲಿರುವ ಚೋರನೂರಿಗೆ ಮಧ್ಯಾಹ್ನ 3.40ಕ್ಕೆ ಭೇಟಿ ನೀಡಿ, ಹಾನಿಗೊಳಗಾಗಿರುವ ರಾಗಿ ಮತ್ತು ಮೆಕ್ಕೆಜೋಳ ವೀಕ್ಷಿಸಲಿದೆ. ಚೋರನೂರಿಗೆ ಕುಡಿಯುವ ನೀರು ಪೂರೈಸುತ್ತಿರುವ ಖಾಸಗಿ ಕೊಳವೆ ಬಾವಿಗೂ ಭೇಟಿ ನೀಡಲಿದೆ.

ಸಂಜೆ 4.15ಕ್ಕೆ ಕೋಡಿಹಳ್ಳಿಯಲ್ಲಿ ರಾಗಿ ಹಾಗೂ ಮೆಕ್ಕೆಜೋಳದ ಬೆಳೆಗಳನ್ನು ಪರಿಶೀಲಿಸುವ ತಂಡ, ಹಳೇಜೋಗಿ ಕಲ್ಲು ಗ್ರಾಮಕ್ಕೆ ನೀರು ಸರಬರಾಜು ಮಾಡುವ ಬಂಡ್ರಿಯ ಜಲಜೀವನ್‌ ಮಿಷನ್‌ ಯೋಜನೆ ವೀಕ್ಷಿಸಲಿದೆ. ಸಂಜೆ 5.50ಕ್ಕೆ ನಿಡಗುರ್ತಿ ಗ್ರಾಮದಲ್ಲಿ ರಾಗಿ ಮತ್ತು ಶೇಂಗಾ ಹೊಲಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಲಿದೆ.

ಎಸ್‌.ಮಲ್ಲಾಪುರಕ್ಕೆ ಸಂಜೆ 5.45ಕ್ಕೆ ಬರಲಿರುವ ತಂಡ, ತೊಗರಿ ಹೊಲಗಳು, ಹನಿ ನೀರಾವರಿ, ತುಂತುರು ನೀರಾವರಿ ಯೋಜನೆಗಳಡಿ ಬೆಳೆದ ಮಾವು, ತೆಂಗಿನ ಬೆಳೆ ವೀಕ್ಷಿಸಲಿದೆ. ರೈತರೊಂದಿಗೆ ಸಮಾಲೋಚನೆ ನಡೆಸುವ ಅಧಿಕಾರಿಗಳು ಸಂಜೆ 6.10ಕ್ಕೆ ಮರಿಯಮ್ಮನಹಳ್ಳಿ ಮೂಲಕ ಹೊಸಪೇಟೆಗೆ ತೆರಳಿ ಕಮಲಾಪುರದಲ್ಲಿ ತಂಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.