ADVERTISEMENT

ಯೋಜನೆ ಜಾರಿ: ಕಾಲಮಿತಿ ಪಾಲನೆಗೆ ಸೂಚನೆ

ಕೆಎಂಇಆರ್‌ಸಿಯ 25ನೇ ಸಭೆ; ಯೋಜನೆಗಳ ಪರಾಮರ್ಶೆ ನಡೆಸಿದ ಮೇಲ್ವಿಚಾರಣಾ ಪ್ರಾಧಿಕಾರ

ಆರ್. ಹರಿಶಂಕರ್
Published 6 ಫೆಬ್ರುವರಿ 2026, 2:38 IST
Last Updated 6 ಫೆಬ್ರುವರಿ 2026, 2:38 IST
<div class="paragraphs"><p>ಗಣಿಗಾರಿಕೆ</p></div>

ಗಣಿಗಾರಿಕೆ

   

ಬಳ್ಳಾರಿ: ‘ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಜೆಡ್)’ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಾಲಮಿತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ದ ಇತ್ತೀಚಿನ ಸಭೆಯಲ್ಲಿ ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. 

ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಅಧ್ಯಕ್ಷತೆಯಲ್ಲಿ ಜ.19ರಂದು ಮೇಲ್ವಿಚಾರಣಾ ಪ್ರಾಧಿಕಾರ (ಒ.ಎ.)ದ 25ನೇ ಸಭೆ ನಡೆದಿದೆ. ಸಭಾ ನಡಾವಳಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ADVERTISEMENT

ಸಭೆಯಲ್ಲಿ ಸಿಇಪಿಎಂಐಜೆಡ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಜತೆಗೆ, ಗಣಿಗಾರಿಕೆ ಪೀಡಿತ ಜಿಲ್ಲೆ (ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು)ಗಳಲ್ಲಿ ಹೊಸ ಮೂಲಸೌಕರ್ಯ, ಕಲ್ಯಾಣ ಮತ್ತು ಪರಿಸರ ಪುನಶ್ಚೇತನ ಕಾರ್ಯಕ್ರಮಗಳಿಗೆ ಅನುಮೋದನೆಯನ್ನೂ ನೀಡಲಾಗಿದೆ. 

ಒಟ್ಟು ₹12,528.09 ಕೋಟಿ ಮೌಲ್ಯದ 522 ಪ್ರಸ್ತಾವನೆಗಳನ್ನು ಇಲ್ಲಿಯವರೆಗೆ ಕೆಎಂಇಆರ್‌ಸಿ ಅನುಮೋದಿಸಿದೆ. ಇವುಗಳಲ್ಲಿ, 352 ಯೋಜನೆಗಳಿಗೆ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್‌ಗಳು) ಸಲ್ಲಿಕೆಯಾಗಿವೆ ಮತ್ತು ಮೌಲ್ಯಮಾಪನ ಮಾಡಲಾಗಿದೆ. 296ಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. 193 ಕಾಮಗಾರಿಗಳಿಗೆ ಕಾರ್ಯಾದೇಶಗಳು ಸಿಕ್ಕಿವೆ. ವೆಚ್ಚವು ₹1,072.33 ಕೋಟಿ ತಲುಪಿದೆ. ಆದಾಗ್ಯೂ, ಮುಖ್ಯವಾಗಿ ಜಲಾನಯನ ಮತ್ತು ಆರೋಗ್ಯ ಇಲಾಖೆಗಳಿಂದ 170 ಡಿಪಿಆರ್‌ಗಳು ಇನ್ನೂ ಬಾಕಿ ಉಳಿದಿವೆ. ಈ ಬಗ್ಗೆ ಮೇಲ್ವಿಚಾರಣಾ ಪ್ರಾಧಿಕಾರವು ಇಲಾಖೆಗಳಿಂದ ವಿವರಣೆ ಕೇಳಿತು. 

ಟೆಂಡರ್ ವಿಳಂಬ, ಭೂ ಸ್ವಾಧೀನದಲ್ಲಿನ ಅಡೆತಡೆಗಳು, ಅನುಸರಣೆ ಪ್ರಕ್ರಿಯೆಗಳಿಂದಾಗಿ ವಿಳಂಬವಾಗುತ್ತಿರುವುದಾಗಿ ಅಧಿಕಾರಿಗಳು ವಿವರಿಸಿದರು. ಇಲಾಖೆಗಳು 90 ದಿನಗಳಲ್ಲಿ ಡಿಪಿಆರ್ ಪೂರ್ಣಗೊಳಿಸಬೇಕು. ನಿಗದಿತ ಸಮಯದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾರ್ಯಾದೇಶಗಳನ್ನು ತ್ವರಿತವಾಗಿ ನೀಡಬೇಕು ಎಂದು ಒ.ಎ ಸೂಚಿಸಿದರು. 

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್‌ಡಿಬಿ)ಯ ‘ಬಳ್ಳಾರಿ ಕುಡಿಯುವ ನೀರಿನ ಯೋಜನೆ’ಯ ಕುರಿತು ಮೇಲ್ವಿಚಾರಣಾ ಪ್ರಾಧಿಕಾರದ ಸಭೆಯಲ್ಲಿ ಗಹನ ಚರ್ಚೆ ನಡೆದಿದೆ. ಯೋಜನೆ ಜಾರಿಗೆ ಮಂಡಳಿಯು ₹49.46 ಕೋಟಿ ಕೋರಿತು. ಆದರೆ ಒಪ್ಪಂದದ ನಿಯಮಗಳಲ್ಲಿನ ಬದಲಾವಣೆ, ಜಾಗ ಹಸ್ತಾಂತರಗೊಳ್ಳದೇ ಇರುವುದು, ಹಣದ ಪಡೆಯುವುದಲ್ಲಿ ಮಿತಿ ದಾಟುತ್ತಿರುವುದನ್ನು  ಪ್ರಶ್ನೆ ಮಾಡಲಾಯಿತು. ಅನುದಾನದ ಷರತ್ತುಬದ್ಧ ಬಿಡುಗಡೆಗೆ ಮೊದಲು ಕೆಎಂಇಆರ್‌ಸಿಯು ಮಂಡಳಿಯಿಂದ ಮಾಹಿತಿಯನ್ನು ಅಪೇಕ್ಷಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.