ADVERTISEMENT

ಬಿಸಿಲಿನಿಂದ ಬಸವಳಿಯುತ್ತಿರುವ ಚಿಣ್ಣರು

ಕನಿಷ್ಠ ಸೌಕರ್ಯವಿಲ್ಲದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಪರದಾಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಮಾರ್ಚ್ 2019, 19:31 IST
Last Updated 27 ಮಾರ್ಚ್ 2019, 19:31 IST
ಹೊಸಪೇಟೆಯ ಅಮರಾವತಿಯಲ್ಲಿನ ಅಂಗನವಾಡಿ ಕೇಂದ್ರದ ಮಕ್ಕಳು ಬರಿಗಾಲಲ್ಲೇ ಕೆಂಡದಂತಹ ಬಿಸಿಲಿನಲ್ಲಿ ಮನೆ ಕಡೆ ಹೆಜ್ಜೆ ಹಾಕಿದರು–ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ
ಹೊಸಪೇಟೆಯ ಅಮರಾವತಿಯಲ್ಲಿನ ಅಂಗನವಾಡಿ ಕೇಂದ್ರದ ಮಕ್ಕಳು ಬರಿಗಾಲಲ್ಲೇ ಕೆಂಡದಂತಹ ಬಿಸಿಲಿನಲ್ಲಿ ಮನೆ ಕಡೆ ಹೆಜ್ಜೆ ಹಾಕಿದರು–ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ   

ಹೊಸಪೇಟೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಸೌಕರ್ಯಗಳು ಇಲ್ಲದ ಕಾರಣ ಚಿಣ್ಣರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅದರಲ್ಲೂ ಬೇಸಿಗೆಯಲ್ಲಿ ಅವರ ಪಾಡು ಹೇಳತೀರದಾಗಿದೆ. ಬಹುತೇಕ ಅಂಗನವಾಡಿಗಳು ತಗಡಿನ ಶೀಟ್‌ಗಳು ಹೊಂದಿವೆ. ಕೆಲವು ಕೇಂದ್ರಗಳಲ್ಲಿ ಕನಿಷ್ಠ ಫ್ಯಾನುಗಳು ಸಹ ಇಲ್ಲ. ಒಂದೇ ಒಂದು ಬಲ್ಬ ಬೆಳಕಿನ ಅಡಿಯಲ್ಲಿ ಕೇಂದ್ರಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮೇ ವರೆಗೆ 39ರಿಂದ 42 ಡಿಗ್ರಿ ಆಸುಪಾಸಿನ ವರೆಗೆ ಬಿಸಿಲು ಇರುತ್ತದೆ. ಕೆಂಡದಂತಹ ಬಿಸಿಲಿನಿಂದ ಎಲ್ಲ ಸೌಕರ್ಯವಿರುವ ಮನೆಗಳಲ್ಲಿಯೇ ಜನರಿಗೆ ಕೂರಲು ಆಗದಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅಂತಹದ್ದರಲ್ಲಿ ಅಂಗನವಾಡಿಗಳಲ್ಲಿ ಮಕ್ಕಳು ಹೇಗೆ ತಾನೇ ಕೂರಲು ಸಾಧ್ಯ?

ADVERTISEMENT

ಅಂಗನವಾಡಿಗಳಿಗೆ ಹೋಗುವವರು ಬಹುತೇಕ ಬಡವರು, ಕೂಲಿ ಕಾರ್ಮಿಕರು ಹಾಗೂ ಕೊಳೆಗೇರಿ ನಿವಾಸಿಗಳ ಮಕ್ಕಳು. ಪೋಷಕರು ಕೂಲಿ ಕೆಲಸಕ್ಕೆ ಹೋಗುವಾಗ, ಮಕ್ಕಳನ್ನು ಕೇಂದ್ರಗಳಲ್ಲಿ ಬಿಟ್ಟು ಹೋಗುತ್ತಾರೆ. ಇಡೀ ದಿನ ಅವರು ಅಲ್ಲಿಯೇ ಕಳೆಯುತ್ತಾರೆ. ಇನ್ನು ಕೆಲ ಮಕ್ಕಳು ಮಧ್ಯಾಹ್ನದ ನಂತರ ಮನೆಗೆ ಹಿಂತಿರುಗುತ್ತಾರೆ. ಅದೆಷ್ಟೋ ಮಕ್ಕಳಿಗೆ ಒಳ್ಳೆಯ ಬಟ್ಟೆ ಕೂಡ ಧರಿಸಿಕೊಳ್ಳಲು ಇರುವುದಿಲ್ಲ. ಬರಿಗಾಲಲ್ಲೇ ಅಂಗನವಾಡಿಗೆ ಬಂದು ಹೋಗುತ್ತಾರೆ.

ಸುಡುವ ಬಿಸಿಲಿನಿಂದ ರಸ್ತೆಗಳು ಕಾದು ಹೆಂಚಿನಂತಾಗುತ್ತವೆ. ಇಂತಹ ಪರಿಸ್ಥಿತಿಯಲ್ಲೇ ಮಕ್ಕಳು ಓಡಾಡಬೇಕಾದ ಪರಿಸ್ಥಿತಿ ಇದೆ. ಸರ್ಕಾರಿ ಶಾಲೆಗಳ ಮಾದರಿಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೂ ವಸ್ತ್ರ, ಶೂ ಕೊಡಬೇಕು ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರು.

‘ಅಂಗನವಾಡಿಗಳಿಗೆ ಹೋಗುವವರು ಬಹುತೇಕ ಬಡವರ ಮಕ್ಕಳೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆ ಮಕ್ಕಳಿಗೆ ವರ್ಷಕ್ಕೆ ಕನಿಷ್ಠ ಎರಡು ಜೋಡಿ ಬಟ್ಟೆ, ಶೂ ಕೊಡಬೇಕು. ಸರ್ಕಾರ ಈಗಾಗಲೇ ಪೋಷಕಾಂಶ ಹೊಂದಿರುವ ಆಹಾರ ಪೂರೈಸುತ್ತಿದೆ. ಇದರ ಜತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಕೆಲಸ ಕೂಡ ಮಾಡಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಬಿಸಾಟಿ ಮಹೇಶ್‌.

‘ಬಳ್ಳಾರಿ ಬಿಸಿಲ ನಾಡು. ಬೇಸಿಗೆಯಲ್ಲಿ ಫ್ಯಾನಿನ ಅಡಿಯಲ್ಲಿ ಕೂತರು ಜನ ಬೆವರುತ್ತಾರೆ. ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ಚಿಣ್ಣರು ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹೀಗಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಏರ್‌ ಕೂಲರ್‌ ಕೊಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ತಗಡಿನ ಶೀಟ್‌ ಬದಲು ಆರ್‌.ಸಿ.ಸಿ. ಇರುವ ಕಟ್ಟಡಗಳಲ್ಲಿ ಕೇಂದ್ರಗಳನ್ನು ನಡೆಸಬೇಕು’ ಎಂದು ಆಗ್ರಹಿಸಿದರು.

‘ಬೇಸಿಗೆಗೆ ತಕ್ಕಂತೆ ಅಗತ್ಯ ಸೌಕರ್ಯ ಕಲ್ಪಿಸಿಕೊಡಲು ಸಾಧ್ಯವಾಗದಿದ್ದಲ್ಲಿ ಆ ಸಂದರ್ಭದಲ್ಲಿ ಕೇಂದ್ರಗಳನ್ನು ಮುಚ್ಚಿಡುವುದೇ ವಾಸಿ. ಆದರೆ, ವರ್ಷದ ಎಲ್ಲ ದಿನಗಳಲ್ಲಿ ಅಂಗನವಾಡಿಗಳು ನಡೆಯಬೇಕು ಎನ್ನುವುದು ಸರ್ಕಾರದ ಆಶಯ. ಆ ಆಶಯ ಈಡೇರಬೇಕಾದರೆ ಚಿಣ್ಣರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಇನ್ನೊಬ್ಬ ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್‌ ಕುಮಾರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.