
ಬಳ್ಳಾರಿ: ಗಣಿಪೀಡಿತ ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ ಪುನಶ್ಚೇತನಗೊಳಿಸುವ ಮತ್ತು ತೋಟಗಾರಿಕಾ ವಲಯವನ್ನು ಬಲಪಡಿಸುವ ಉದ್ದೇಶದೊಂದಿಗೆ ಬಳ್ಳಾರಿ ತಾಲೂಕಿನಲ್ಲಿ ₹37.63 ಕೋಟಿ ವೆಚ್ಚದಲ್ಲಿ ಸಮಗ್ರ ಜೈವಿಕ ಕೇಂದ್ರ ಮತ್ತು ಮೆಣಸಿನಕಾಯಿ ಸಂಸ್ಕರಣಾ ಘಟಕ ಸ್ಥಾಪಿಸುವ ಪ್ರಸ್ತಾವಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ದ ಮೇಲುಸ್ತುವಾರಿ ಪ್ರಾಧಿಕಾರ ಇತ್ತೀಚೆಗೆ ಅನುಮೋದನೆ ನೀಡಿದೆ.
ತೋಟಗಾರಿಕೆ ಇಲಾಖೆ ಸಿದ್ಧಪಡಿಸಿದ್ದ ಈ ಪ್ರಸ್ತಾವನೆಯು ಸದ್ಯ ಕೆಎಂಇಆರ್‌ಸಿಯ ಅನುಮೋದನೆಯೊಂದಿಗೆ ಕೃತಿ ರೂಪಕ್ಕೆ ಬರಲು ಅಣಿಯಾಗಿದೆ. ಒಂದರಿಂದ ಮೂರು ವರ್ಷಗಳ ಅವಧಿಯಲ್ಲಿ ಇದು ಕಾರ್ಯಗತಗೊಳ್ಳಲಿದೆ.
ಮಣ್ಣಿನ ಪೋಷಣೆಯನ್ನು ಸುಧಾರಿಸುವುದು ಮತ್ತು ಗಣಿಗಾರಿಕೆಯಿಂದ ಬೆಳೆ ಇಳುವರಿ ಕುಂಠಿತವಾಗಿರುವ ಹಳ್ಳಿಗಳಲ್ಲಿ ಪರಿಸರ ಸಮತೋಲನ ಸಾಧಿಸುವುದು ಜೈವಿಕ ಕೇಂದ್ರದ ಮೂಲ ಉದ್ದೇಶ ಎಂದು ತೋಟಗಾರಿಕೆ ಇಲಾಖೆಯು ತನ್ನ ಪ್ರಸ್ತಾವನೆಯಲ್ಲಿ ವಿವರಿಸಿತ್ತು. ಈ ಕೇಂದ್ರವು ಮಣ್ಣಿನ ಆರೋಗ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಉತ್ತೇಜಿಸುತ್ತದೆ ಎಂದೂ ತಿಳಿಸಲಾಗಿತ್ತು.
ಜೈವಿಕ ಕೇಂದ್ರದಲ್ಲಿ ಪ್ರಯೋಗಾಲಯಗಳು, ಉತ್ಪಾದನಾ ಘಟಕಗಳು, ತರಬೇತಿ ಸಭಾಂಗಣ, ಸಂಗ್ರಹಣಾ ಮೂಲಸೌಕರ್ಯ, ‘ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯ’, ಜೈವಿಕ ಗೊಬ್ಬರಗಳು ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳ ಉತ್ಪಾದನಾ ಘಟಕ ಇರಲಿದೆ. ರೈತರಿಗೆ ಪೋಷಕಾಂಶ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲು ಪ್ರಯೋಗಾಲಯದಲ್ಲಿ ವಾರ್ಷಿಕವಾಗಿ ಸುಮಾರು 6,000 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ.
ಪರ್ಯಾಯ ಜೀವನೋಪಾಯಕ್ಕೆ ನೆರವು: ಜನರ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ. ರೈತರು, ಮಹಿಳೆಯರು ಮತ್ತು ಗ್ರಾಮೀಣ ಯುವಕರಲ್ಲಿ ಅಣಬೆ ಕೃಷಿಯನ್ನು ಉತ್ತೇಜಿಸಲು ವರ್ಷಕ್ಕೆ 8 ಟನ್ ಸಾಮರ್ಥ್ಯದ ಮಶ್ರೂಮ್ ಸ್ಪಾನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತದೆ.
ಮಾನವ ಸಂಪನ್ಮೂಲ ಅಭಿವೃದ್ಧಿಯು ಜೈವಿಕ ಕೇಂದ್ರದ ಪ್ರಮುಖ ಉದ್ದೇಶವಾಗಿದ್ದು, ಸುಮಾರು 1,000 ಸದಸ್ಯರಿಗೆ ತರಬೇತಿ, ಕೌಶಲ ಅಭಿವೃದ್ಧಿ ಮತ್ತು ಕ್ಷೇತ್ರ ಭೇಟಿಗಳನ್ನು ಆಯೋಜಿಸಲಾಗುತ್ತದೆ. 600 ರೈತರಿಗೆ ಪ್ರತಿ ವರ್ಷ ತರಬೇತಿಯನ್ನೂ ನೀಡಲಾಗುತ್ತದೆ.
ಮೆಣಸಿನಕಾಯಿ ಮೌಲ್ಯವರ್ಧನೆ: ಮೆಣಸಿನಕಾಯಿಯನ್ನು ಬಳ್ಳಾರಿಯ ಪ್ರಮುಖ ವಾಣಿಜ್ಯ ಬೆಳೆ ಎಂಬುದನ್ನು ಕೆೆಎಂಇಆರ್‌ಸಿ ಮನಗಂಡಿದೆ. ಮೆಣಸಿನಕಾಯಿ ಕೊಯ್ಲಿನ ನಂತರದ ನಷ್ಟವನ್ನು ತಡೆಯಲು ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಮೆಣಸಿನಕಾಯಿ ಸಂಸ್ಕರಣಾ ಕೇಂದ್ರ ಆರಂಭಿಸಲು ಕೆಎಂಇಆರ್‌ಸಿ ಅನುಮೋದನೆ ನೀಡಿದೆ. ಮೆಳಸಿನಕಾಯಿಯ ಒಲಿಯೊರೆಸಿನ್ (ರಾಳ, ಮೂಲ ಸಾರ) ಹೊರತೆಗೆಯುವಿಕೆ ಮತ್ತು ಸಂಸ್ಕರಣಾ ವ್ಯವಸ್ಥೆಯನ್ನು ಇದು ಒಳಗೊಂಡಿರಲಿದೆ. ಮೆಣಸಿನಕಾಯಿಯ ಮೌಲ್ಯವರ್ಧನೆ ಮತ್ತು ಉತ್ತಮ ಬೆಲೆ ಸಿಗಲು ಸಂಸ್ಕರಣಾ ಘಟಕವು ನೆರವಾಗಲಿದೆ ಎಂದು ತೋಟಗಾರಿಕೆ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ಹೇಳಿತ್ತು.
ಈ ಯೋಜನೆಯು ಬಳ್ಳಾರಿ, ಸಂಡೂರು ಮತ್ತು ನೆರೆಯ ಪ್ರದೇಶಗಳ ಸುಮಾರು 5,000 ರೈತರಿಗೆ ಗುಣಮಟ್ಟದ ಜೈವಿಕ ಅಂಶಗಳನ್ನು ಪೂರೈಸುವ, ಉತ್ಪಾದಕತೆಯನ್ನು ಸುಧಾರಿಸುವ ಮತ್ತು ತೋಟಗಾರಿಕೆಯ ಸುಸ್ಥಿರತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಈ ಯೋಜನೆಗಳು ಒಳಗೊಂಡಿವೆ.
ಜೈವಿಕ ಕೇಂದ್ರ ಮೆಣಸಿನಕಾಯಿ ಸಂಸ್ಕರಣಾ ಕೇಂದ್ರ ಬಳ್ಳಾರಿ ತಾಲೂಕಿನಲ್ಲಿ ಸ್ಥಾಪನೆಯಾದರೂ ಇಡೀ ಜಿಲ್ಲೆಗೇ ಇದರ ಉಪಯೋಗ ಸಿಗಲಿದೆ. ಮೆಣಸಿನಕಾಯಿಯನ್ನು ವ್ಯಾಪಕವಾಗಿ ಬೆಳೆಯುವ ಜಿಲ್ಲೆಗೆ ಇಂಥ ಕೇಂದ್ರಗಳ ಅಗತ್ಯವಿದೆನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ
ನಾಗೇಂದ್ರ ಪ್ರಸಾದ್ ಕಲ್ಪನೆ ಕೆಎಂಇಆರ್‌ಸಿ ಅನುಮೋದನೆ ನೀಡಿರುವ ಜೈವಿಕ ಕೇಂದ್ರ ಮತ್ತು ಮೆಣಸಿನಕಾಯಿ ಸಂಸ್ಕರಣಾ ಕೇಂದ್ರವು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರ ಕಲ್ಪನೆಯಲ್ಲಿ ಸಿದ್ಧವಾದ ಯೋಜನೆ. ಕೃಷಿ ವಿಜ್ಞಾನದಲ್ಲಿ ಎಂಎಸ್ಸಿ ಪದವಿಯನ್ನೂ ಪಡೆದಿರುವ ಅವರು ಇಂಥದ್ದೊಂದು ಯೋಜನೆಯ ಅಗತ್ಯವನ್ನು ಆಗಾಗ್ಗೆ ಪ್ರತಿಪಾದಿಸುತ್ತಲೇ ಬಂದಿದ್ದರು. ಅಲ್ಲದೇ ಈ ಯೋಜನೆ ಸಾಕಾರಗೊಳಿಸುವ ಮಾತುಗಳನ್ನು ಆಡಿದ್ದರು. ಸದ್ಯ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಎಲ್ಲವೂ ಸರಿಯಾಗಿ ನಡೆದರೆ ಕೆಲವೇ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.