ADVERTISEMENT

ಬಳ್ಳಾರಿ: ಈಜುಕೊಳ, ಚಿತ್ರಮಂದಿರ ಸದ್ಯಕ್ಕಿಲ್ಲ!

ಹೊಸ ಸಿನಿಮಾ ಬಂದರಷ್ಟೇ ಆರಂಭ, ಮಾರ್ಗಸೂಚಿ ಹೊರಡಿಸದ ಕ್ರೀಡಾ ಇಲಾಖೆ

ಕೆ.ನರಸಿಂಹ ಮೂರ್ತಿ
Published 14 ಅಕ್ಟೋಬರ್ 2020, 19:30 IST
Last Updated 14 ಅಕ್ಟೋಬರ್ 2020, 19:30 IST
ಬಳಕೆಗೆ ಸಿದ್ಧವಾಗಿದ್ದರೂ ಮಾರ್ಗಸೂಚಿ ಇಲ್ಲದೆ ಬಳ್ಳಾರಿಯ ಕ್ರೀಡಾ ಇಲಾಖೆಯ ಈಜುಕೊಳ ಬಾಗಿಲು ಮುಚ್ಚಿದೆ
ಬಳಕೆಗೆ ಸಿದ್ಧವಾಗಿದ್ದರೂ ಮಾರ್ಗಸೂಚಿ ಇಲ್ಲದೆ ಬಳ್ಳಾರಿಯ ಕ್ರೀಡಾ ಇಲಾಖೆಯ ಈಜುಕೊಳ ಬಾಗಿಲು ಮುಚ್ಚಿದೆ   

ಬಳ್ಳಾರಿ: ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅ.15ರಿಂದ ಚಿತ್ರಮಂದಿರ ಮತ್ತು ಈಜುಕೊಳಗಳನ್ನು ಆರಂಭಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಜಿಲ್ಲೆಯಲ್ಲಿ ಸದಸ್ಯ ಸಿನಿಮಾ ಪ್ರಿಯರಿಗೆ ಮತ್ತು ಈಜುಪಟುಗಳಿಗೆ ನಿರಾಶೆಯೇ ಮುಂದುವರಿಯಲಿದೆ.

‘ಹೊಸ ಸಿನಿಮಾಗಳು ಬಿಡುಗಡೆಯಾಗದೇ ಇರುವುದರಿಂದ, ಚಿತ್ರಮಂದಿರಗಳನ್ನು ಆರಂಭಿಸುವುದಿಲ್ಲ’ ಎಂದು ಚಿತ್ರಮಂದಿರಗಳ ಮಾಲೀಕರು ಹೇಳಿದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾರ್ಗಸೂಚಿ ನೀಡದೇ ಇರುವುದರಿಂದ ಈಜುಕೊಳವನ್ನು ಆರಂಭಿಸುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.ನಗರದ ಹಲವು ಚಿತ್ರಮಂದಿರಗಳ ದುರಸ್ತಿ, ನವೀಕರಣ ಕಾರ್ಯ ಮುಂದುವರಿದಿದೆ

ಚಿತ್ರಮಂದಿರ: ‘ಜನಪ್ರತಿಯ ನಾಯಕ, ನಾಯಕಿಯರ ಹೊಸ ಸಿನಿಮಾಗಳು ಬಿಡುಗಡೆಯಾದರಷ್ಟೇ ಅಭಿಮಾನಿಗಳು ಚಿತ್ರಮಂದಿರದ ಕಡೆಗೆ ಬರುತ್ತಾರೆ. ಆದರೆ, ಸದ್ಯ ಯಾವ ನಿರ್ಮಾಪಕರೂ ಹೊಸ ಸಿನಿಮಾ ಬಿಡುಗಡೆ ಮಾಡಲು ಮುಂದೆ ಬಂದಿಲ್ಲ. ಹೀಗಾಗಿ ಚಿತ್ರಮಂದಿರ ಆರಂಭಿಸಿದರೆ ನಷ್ಟ ಹೊಂದಬೇಕಾಗುತ್ತದೆ’ ಎಂದು ಬಳ್ಳಾರಿ ಜಿಲ್ಲಾ ಚಿತ್ರಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

ADVERTISEMENT

‘ಕೆಲವು ನಿರ್ಮಾಪಕರು ಮತ್ತು ವಿತರಕರು ಹಳೇ ಸಿನಿಮಾಗಳನ್ನು ಮತ್ತೆ ಬಿಡುಗಡೆ ಮಾಡುತ್ತಿದ್ದಾರೆ. ಆ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರುವುದಿಲ್ಲ’ ಎಂದು ಹೇಳಿದರು.

ವಿದ್ಯುತ್‌ ದರ: ‘ಚಿತ್ರಮಂದಿರಗಳು ಏಳು ತಿಂಗಳಿಂದ ಮುಚ್ಚಿವೆ. ಪ್ರದರ್ಶನವಿಲ್ಲದಿದ್ದರೆ ಆದಾಯವೂ ಇರುವುದಿಲ್ಲ. ಇಂಥ ನಷ್ಟದ ಸನ್ನಿವೇಶದಲ್ಲಿ ವಿದ್ಯುತ್‌ ಬಳಕೆಯ ಕಡ್ಡಾಯ ಶುಲ್ಕಗಳನ್ನೂ ಪಾವತಿಸಲೇಬೇಕು ಎಂದು ಸರ್ಕಾರ ಹೇಳಿದೆ. ಆದರೆ ಮುಚ್ಚಿದ ಚಿತ್ರಮಂದಿರದಲ್ಲಿ ಬಳಕೆಯಾದ ವಿದ್ಯುತ್‌ನ ಶುಲ್ಕವನ್ನಷ್ಟೇ ಪಾವತಿಸಲು ಸಾಧ್ಯ ಎಂಬುದು ನಮ್ಮ ನಿಲುವು. ಈ ಸಂಬಂಧ ಮನವಿಗೆ ಸರ್ಕಾರ ಸ್ಪಂದಿಸಿದ ಬಳಿಕವಷ್ಟೇ ಚಿತ್ರಮಂದಿರ ಆರಂಭಿಸುವ ಕುರಿತು ಚಿಂತಿಸುತ್ತೇವೆ’ ಎಂದು ತಿಳಿಸಿದರು.

‘ಪ್ರತಿ ಮೂರು ವರ್ಷಕ್ಕೊಮ್ಮೆ ಪರವಾನಗಿ ಶುಲ್ಕವನ್ನು ಪಾವತಿಸುವ ವ್ಯವಸ್ಥೆ ಬದಲಿಗೆ, ಪ್ರತಿ ವರ್ಷವೂ ಶುಲ್ಕ ವಸೂಲು ಪಾವತಿಸುವ ವ್ಯವಸ್ಥೆಯನ್ನು ಪಾಲಿಕೆ ಜಾರಿಗೆ ತಂದಿದೆ. ಇದು ಕೂಡ ಚಿತ್ರಮಂದಿರಗಳ ಮಾಲೀಕರ ಮೇಲೆ ಹೊರೆಯಾಗಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

40 ಚಿತ್ರಮಂದಿರ: ಜಿಲ್ಲೆಯ 40 ಚಿತ್ರಮಂದಿರಗಳ ಪೈಕಿ ಜಿಲ್ಲಾ ಕೇಂದ್ರವಾದ ಬಳ್ಳಾರಿ ನಗರದಲ್ಲೇ 10 ಚಿತ್ರಮಂದಿರಗಳಿವೆ. ಹೊಸಪೇಟೆಯಲ್ಲಿ 4, ಉಳಿದ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದೆರಡು ಚಿತ್ರಮಂದಿರಗಳಿವೆ ಎಂದು ಮಾಹಿತಿ ನೀಡಿದರು.

ಈಜುಕೊಳ ಸಿದ್ಧ, ಆರಂಭವಿಲ್ಲ!

ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳವನ್ನು ಬಳಕೆಗೆ ಸಿದ್ಧಪಡಿಸಲಾಗಿದೆ. ಆದರೆ ಇಲಾಖೆಯ ಮಾರ್ಗಸೂಚಿ ಬರದೇ ಇರುವುದರಿಂದ ಸದ್ಯ ತೆರೆಯದಿರಲು ನಿರ್ಧರಿಸಲಾಗಿದೆ.
ಲಾಕ್‌ಡೌನ್‌ ಬಳಿಕ ಸ್ಥಗಿತಗೊಳಿಸಿದ್ದ ಈಜುಕೊಳದ ನೀರಿನ ಶುದ್ಧೀಕರಣ ಕೆಲಸ ಒಂದು ವಾರದಿಂದ ನಡೆದಿದೆ. ಲಾಕ್‌ಡೌನ್‌ ಅವಧಿಯಲ್ಲಿ ತುಂಬಿಸಿದ್ದ ಹೊಸನೀರಿನಲ್ಲಿದ್ದ ಲವಣಾಂಶವನ್ನು ತೆಗೆಯಲಾಗಿದೆ. ಕಲ್ಮಶವೂ ತೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.