ADVERTISEMENT

ನೇರ ಕಸ ಸಂಗ್ರಹಕ್ಕೆ ಬರಲಿವೆ ‘ಮಿನಿ ಟ್ರ್ಯಾಕ್ಟರ್‌’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಜುಲೈ 2019, 19:30 IST
Last Updated 15 ಜುಲೈ 2019, 19:30 IST
ಮಿನಿ ಟ್ರ್ಯಾಕ್ಟರ್‌ ಓಡಿಸಿ, ಪರಿಶೀಲನೆ ನಡೆಸುತ್ತಿರುವ ನಗರಸಭೆ ಪೌರಾಯುಕ್ತ ವಿ. ರಮೇಶ
ಮಿನಿ ಟ್ರ್ಯಾಕ್ಟರ್‌ ಓಡಿಸಿ, ಪರಿಶೀಲನೆ ನಡೆಸುತ್ತಿರುವ ನಗರಸಭೆ ಪೌರಾಯುಕ್ತ ವಿ. ರಮೇಶ   

ಹೊಸಪೇಟೆ: ಕಿರು ಓಣಿಗಳಲ್ಲಿ ಸಂಚರಿಸಿ, ಮನೆ ಬಾಗಿಲಿನಿಂದ ನೇರವಾಗಿ ಕಸ ಸಂಗ್ರಹಿಸಲು ಅನುಕೂಲವಾಗುವಂತಹ ಮಿನಿ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ನಗರಸಭೆ ಸಿದ್ಧತೆ ನಡೆಸಿದೆ.

ಈಗಾಗಲೇ ನಗರದ ಎಲ್ಲ 35 ವಾರ್ಡುಗಳಲ್ಲಿ ಟ್ರ್ಯಾಕ್ಟರ್‌, ಆಟೊ ಟಿಪ್ಪರ್‌ಗಳ ಮೂಲಕ ಕಸ ಸಂಗ್ರಹಿಸಲಾಗುತ್ತಿದೆ. ಆದರೆ, ಕಿರಿದಾದ ಓಣಿಗಳಲ್ಲಿ ಈ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯರಸ್ತೆ ಹಾಗೂ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಇವುಗಳು ನಿತ್ಯ ಕಸ ಸಂಗ್ರಹಿಸುತ್ತಿವೆ.

ಈ ವಾಹನಗಳೊಂದಿಗೆ ಧ್ವನಿವರ್ಧಕಗಳನ್ನು ಅಳವಡಿಸಿರುವ ಕಾರಣ ಜನ ಅದರ ಶಬ್ದ ಕೇಳಿ ಕಸ ಹಾಕಲು ಬರುತ್ತಾರೆ. ಕಿರು ಓಣಿಗಳಲ್ಲಿ ನೆಲೆಸಿರುವ ಜನ ಕಸ ತೆಗೆದುಕೊಂಡು ಬರುವಷ್ಟರಲ್ಲಿ ಅನೇಕ ಸಲ ವಾಹನಗಳು ಮುಂದೆ ಹೋಗಿರುತ್ತವೆ. ಇದರಿಂದಾಗಿ ಅನೇಕ ಓಣಿಗಳ ಜನ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿಯೇ ನಗರಸಭೆ ಮಿನಿ ಟ್ರ್ಯಾಕ್ಟರ್‌ಗಳ ಖರೀದಿಗೆ ಮೊರೆ ಹೋಗಿದೆ.

ADVERTISEMENT

₹5 ಲಕ್ಷ ವೆಚ್ಚದಲ್ಲಿ ತಯಾರಾಗಿರುವ ‘ಮ್ಯಾಸಿ ಫರ್ಗ್ಯುಸನ್‌‘ ಕಂಪನಿಯ ಮಿನಿ ಟ್ರ್ಯಾಕ್ಟರ್‌ಗಳನ್ನು ಖರೀದಿಸುವ ಪ್ರಸ್ತಾವ ನಗರಸಭೆಯ ಮುಂದಿದೆ. ಈ ಸಂಬಂಧ ಈಗಾಗಲೇ ನಗರಸಭೆ ಪೌರಾಯುಕ್ತ ವಿ. ರಮೇಶ ಅವರು ಖುದ್ದಾಗಿ ನಗರಸಭೆಯ ಆವರಣದಲ್ಲಿ ವಾಹನಗಳನ್ನು ಓಡಿಸಿ ಪರಿಶೀಲನೆ ನಡೆಸಿದ್ದಾರೆ. ಇಷ್ಟರಲ್ಲೇ ವಾಹನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡು, ಕಿರಿದಾದ ಓಣಿಗಳ ಬೀದಿಗಳಲ್ಲಿ ಕಾಣಿಸಿಕೊಳ್ಳಲಿವೆ.

‘ಕೆಲ ಬಡಾವಣೆಗಳಲ್ಲಿ ಕಿರಿದಾದ ರಸ್ತೆಗಳಿವೆ. ಅಲ್ಲಿ ನಮ್ಮ ಕಸ ಸಂಗ್ರಹಿಸುವ ಟಿಪ್ಪರ್‌ಗಳು ಹೋಗಲು ಆಗುವುದಿಲ್ಲ. ಅಲ್ಲಿ ಸುಗಮವಾಗಿ ಸಂಚರಿಸುವ ವಾಹನಗಳನ್ನು ಖರೀದಿಸುವ ಪ್ರಸ್ತಾವ ನಗರಸಭೆಯ ಮುಂದಿತ್ತು. ಅಷ್ಟೇ ಅಲ್ಲ, ಅನೇಕ ಬಡಾವಣೆಗಳವರು, ‘ನಮ್ಮ ಬಡಾವಣೆಗೆ ಕಸ ಸಂಗ್ರಹಿಸುವ ವಾಹನಗಳು ಬರುವುದಿಲ್ಲ’ ಎಂದು ಗೋಳು ತೋಡಿಕೊಂಡಿದ್ದರು. ಜನರಿಗೆ ಆಗುತ್ತಿರುವ ಅನಾನುಕೂಲ ಮನಗಂಡು ಕಿರು ವಾಹನಗಳ ಖರೀದಿಗೆ ಮುಂದಾಗಿದ್ದೇವೆ’ ಎಂದು ವಿ. ರಮೇಶ ‘ಪ್ರಜಾವಾಣಿ’ಗೆ ವಿವರಿಸಿದರು.

‘ಈಗಾಗಲೇ ನಗರದ ಎಲ್ಲ ವಾರ್ಡುಗಳಿಂದ ನೇರವಾಗಿ ಜನರಿಂದ ಕಸ ಸಂಗ್ರಹಿಸಿ, ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಮಿನಿ ಟ್ರ್ಯಾಕ್ಟರ್‌ಗಳು ಬಂದ ನಂತರ ಇನ್ನಷ್ಟು ಪರಿಣಾಮಕಾರಿಯಾಗಿ ಆಗಲಿದೆ. ಇದರ ಜತೆಗೆ ಏಳರಿಂದ ಎಂಟು ಆಟೊ ಟಿಪ್ಪರ್‌ಗಳನ್ನು ಖರೀದಿಸಲು ಚಿಂತನೆ ನಡೆದಿದೆ‘ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.