
ಬಳ್ಳಾರಿ: ‘ಜೀನ್ಸ್ ಘಟಕಗಳ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ’ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಮಸ್ಯೆಗೆ ಸರ್ಕಾರ ಬುಧವಾರ ಸ್ವಲ್ಪ ಪರಿಹಾರ ಒದಗಿಸಿರುವುದು ಸ್ವಾಗತಾರ್ಹ. ಆದರೆ ಬಳ್ಳಾರಿಯನ್ನು ಜೀನ್ಸ್ ಹಬ್ ಮಾಡುವುದಾಗಿ ಹೇಳಿ ಎರೆಡೂವರೆ ವರ್ಷ ಕಳೆದಿದೆ. ಆದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಮೀನು ಖರೀದಿಯಾಗಿಲ್ಲ. ಖರೀದಿ ಮಾಡಿದ ಜಮೀನನ್ನು ಉದ್ದಿಮೆದಾರರಿಗೆ ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಸರಿಯಲ್ಲ’ ಎಂದರು.
‘ಬಿ. ಗೋನಾಳ್ ಬಳಿಯ 104 ಎಕರೆಯ ಬುಡಾ ಬಡಾವಣೆ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಜನರಿಗೆ ನಿವೇಶನ ಹಂಚಬೇಕು’ ಎಂದು ಆಗ್ರಹಿಸಿದರು.
ಮರಳು ಸ್ಥಗಿತ: ನಗರದಲ್ಲಿ ಮರಳು ಸಾಗಾಣೆ ಸ್ಥಗಿತಗೊಂಡಿದೆ. ಯಾಕೆ ಎಂಬುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಧಿಕಾರಿಗಳು ಹೇಳುತ್ತಿಲ್ಲ. ಇದರಿಂದ ಜನರಿಗೆ ಮರಳು ದೊರೆಯದೆ ಕಳ್ಳತನದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಎಂದರು.
ಬಿಜೆಪಿ ನಗರ ಅಧ್ಯಕ್ಷ ಜಿ. ವೆಂಕಟರಮಣ, ಪಾಲಿಕೆ ಸದಸ್ಯ ಶ್ರಿನಿವಾಸ್ ಮೋತ್ಕರ್, ಎಸ್. ಮಲ್ಲನಗೌಡ, ಕೆ.ಎ.ವೇಮಣ್ಣ, ಹನುಮಂತಪ್ಪ ಇದ್ದರು.