ADVERTISEMENT

ಶಾಸಕರ ಕುದುರೆ ವ್ಯಾಪಾರ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 9:55 IST
Last Updated 9 ಜುಲೈ 2019, 9:55 IST
ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು
ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಹೊಸಪೇಟೆ: ಶಾಸಕರಿಗೆ ಆಮಿಷವೊಡ್ಡಿ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಮುಖಂಡರಾದ ಬಸವರಾಜ ರಾಯರಡ್ಡಿ, ವಿ.ಆರ್‌. ಸುದರ್ಶನ್‌, ಆರ್‌. ಧ್ರುವನಾರಾಯಣ, ಬಿ.ವಿ. ಶಿವಯೋಗಿ ನೇತೃತ್ವದಲ್ಲಿ ನಗರದ ಕಾಲೇಜು ರಸ್ತೆಯಿಂದ ರೋಟರಿ ವೃತ್ತದ ವರೆಗೆ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಬಗೆದ ಶಾಸಕರಿಗೆ ಧಿಕ್ಕಾರ’, ‘ಕೋಮುವಾದಿ, ಸಂವಿಧಾನ ವಿರೋಧಿ ಬಿಜೆಪಿಗೆ ಧಿಕ್ಕಾರ’ ಎಂಬ ಬರಹವುಳ್ಳ ಫಲಕಗಳನ್ನು ಹಿಡಿದುಕೊಂಡು ರ್‍ಯಾಲಿಯಲ್ಲಿ ಹೆಜ್ಜೆ ಹಾಕಿದರು.

ADVERTISEMENT

ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ರಾಯರಡ್ಡಿ, ‘ರಾಜ್ಯ ವಿಧಾನಸಭೆ ಚುನಾವಣೆ ನಂತರ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಸದನದಲ್ಲಿ ಬಹುಮತ ಸಾಬೀತುಪಡಿಸಲಿಲ್ಲ. ಬಳಿಕ ಕಾಂಗ್ರೆಸ್‌–ಜೆ.ಡಿ.ಎಸ್‌. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ, ಹಿಂಬಾಗಿಲಿನ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಅನೈತಿಕ ರಾಜಕಾರಣ ಮಾಡುತ್ತಿದೆ. ಅದರಲ್ಲಿ ಅವರು ಯಶಸ್ವಿಯಾಗವುದಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಆದರೆ, ಜನ ಅವರನ್ನು ಆರಿಸಲಿಲ್ಲ. ಏನೂ ಕೆಲಸ ಮಾಡದ ನರೇಂದ್ರ ಮೋದಿಯವರನ್ನು ಜನ ಎರಡನೇ ಸಲ ಆರಿಸಿದರು. ಅವರು ಪ್ರಧಾನಿಯಾದ ನಂತರ ರೈತರು, ಯುವಕರಿಗೆ ಏನೂ ಮಾಡಿಲ್ಲ’ ಎಂದು ಟೀಕಿಸಿದರು.

ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಫಹೀಮ್‌ ಬಾಷಾ, ಉಮೇಶ್‌, ಉಳಗಿ ವೀರೇಂದ್ರ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಅಮಾಜಿ ಹೇಮಣ್ಣ, ಸಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.