ADVERTISEMENT

ಕಟ್ಟಡ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 12:13 IST
Last Updated 8 ಜುಲೈ 2021, 12:13 IST
ಸಿಐಟಿಯು ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸಿಐಟಿಯು ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಕಟ್ಟಡ ಕಾರ್ಮಿಕರಿಗೆ ₹10,000 ಕೋವಿಡ್‌ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಕಾರ್ಯಕರ್ತರು ಗುರುವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ₹10,000 ಕೋಟಿ ಸೆಸ್‌ ಸಂಗ್ರಹವಾಗಿದೆ. ಹೀಗಿದ್ದರೂ ಸರ್ಕಾರ ಒಬ್ಬ ಕಾರ್ಮಿಕನಿಗೆ ₹3,000 ಪರಿಹಾರ ಘೋಷಿಸಿರುವುದು ಎಷ್ಟು ಸರಿ. ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ ₹10,000 ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಹೆಸರಿಗೆ ಬರೆದ ಮನವಿ ಪತ್ರ ತಹಶೀಲ್ದಾರ್‌ಗೆ ಸಲ್ಲಿಸಿ ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು ಮೂರು ಕೋಟಿ ಜನ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂದ ಅವರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ₹100ರಿಂದ ₹125 ಕೋಟಿ ಹಣ ಬಿಡುಗಡೆ ಮಾಡಿ ಸಾಮಾಜಿಕ ಭದ್ರತೆಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯದ ಎಲ್ಲ ಕಟ್ಟಡ ಕಾರ್ಮಿಕರಿಗೂ ರೇಷನ್‌ ಕಿಟ್‌ ವಿತರಿಸಬೇಕು. ಕೋವಿಡ್‌ ಸೇನಾನಿಗಳಿಗೂ ಆರ್ಥಿಕ ಭದ್ರತೆ ಒದಗಿಸಬೇಕು. ಸಾರಿಗೆ ನೌಕರರ ಮೇಲಿನ ಎಸ್ಮಾ ಕಾನೂನು ವಿಸ್ತರಣೆ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ. ಗೋಪಾಲ್‌, ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನಮ್ಮ, ಕಟ್ಟಡ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಎನ್‌. ಯಲ್ಲಾಲಿಂಗ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.