ADVERTISEMENT

ಯರಿಂಗಳಿಗಿ: ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 3:16 IST
Last Updated 21 ಫೆಬ್ರುವರಿ 2026, 3:16 IST
ಕುರುಗೋಡು ತಾಲ್ಲೂಕಿನ ಯರಿಂಗಳಿಗಿ ಗ್ರಾಮದ ರಸ್ತೆಯ ಮಧ್ಯದಲ್ಲಿ ಕಲುಷಿತ ನೀರು ಸಂಗ್ರಹವಾಗಿದೆ
ಕುರುಗೋಡು ತಾಲ್ಲೂಕಿನ ಯರಿಂಗಳಿಗಿ ಗ್ರಾಮದ ರಸ್ತೆಯ ಮಧ್ಯದಲ್ಲಿ ಕಲುಷಿತ ನೀರು ಸಂಗ್ರಹವಾಗಿದೆ   

ಕುರುಗೋಡು: ತಾಲ್ಲೂಕಿನ ಯರಿಂಗಳಿಗಿ ಗ್ರಾಮದ ನಾಲ್ಕನೇ ವಾರ್ಡ್‍ನಲ್ಲಿ ಚರಂಡಿ ನಿರ್ಮಾಣ ಮಾಡದ ಪರಿಣಾಮ ಕಲುಷಿತ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ನಿರಂತರವಾಗಿ ನೀರು ಹರಿಯುವುದರಿಂದ ರಸ್ತೆಯ ಮಧ್ಯದಲ್ಲಿ ಗುಂಡಿ ನಿರ್ಮಾಣವಾಗಿದ್ದು ಕಲುಷಿತ ನೀರು ರಸ್ತೆಯ ಗುಂಡಿಯಲ್ಲಿ ಶೇಖರಣೆಯಾಗುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕಾಂಪೌಂಡ್‍ಗೆ ಹೊಂದಿಕೊಂಡು ಕಿರು ನೀರು ಸರಬರಾಜು ಘಟಕ ತುಂಬಿ ನಿರಂತರವಾಗಿ ಹರಿಯುವ ನೀರು ರಸ್ತೆಯ ಮಧ್ಯದ ಗುಂಡಿಗೆ ಸೇರುತ್ತಿದೆ.

ರಸ್ತೆಯ ಮಧ್ಯದ ಗುಂಡಿಯಲ್ಲಿ ಕಲುಷಿತ ನೀರು ನಿಲ್ಲುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಆವರಿಸಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಜನರು ಸೊಳ್ಳೆ ಕಡಿತದಿಂದ ಬರುವ ಡೆಂಗಿ, ಮಲೇರಿಯಾ, ಚಿಕೂನ್‍ಗುನ್ಯ, ಮೆದುಳುಜ್ವರದ ಭೀತಿಯಲ್ಲಿ ಕಾಲಕಳೆಯುವಂತಾಗಿದೆ.

ADVERTISEMENT

ಇದೇ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ ಕೇಂದ್ರವಿದೆ. ವಿದ್ಯಾರ್ಥಿಗಳು ನಿತ್ಯ ಇದೇ ಕಲುಷಿತ ನೀರು ದಾಟಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ ಸೂಚನೆಗೂ ಬೆಲೆ ಇಲ್ಲ: 2022ರ ಸೆ.17ರಂದು ಯರಿಂಗಳಿಗಿಯಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಚರಂಡಿ ಸಮಸ್ಯೆ ಪರಿಹರಿಸುವಂತೆ ದೇವೇಂದ್ರ ಎನ್ನುವ ವ್ಯಕ್ತಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರ ಬಳಿ ಅಲವತ್ತುಕೊಂಡಿದ್ದರು. ಸಮಸ್ಯೆಯ ತೀವ್ರತೆಯನ್ನು ಅರಿತ ಜಿಲ್ಲಾಧಿಕಾರಿ, ನರೇಗಾ ಯೋಜನೆಯಲ್ಲಿ ಕ್ರಿಯಾಯೋಜನೆ ತಯಾರಿಸಿ ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದರು. ಸೂಚನೆ ನೀಡಿ ಮೂರು ವರ್ಷ ಐದು ತಿಂಗಳು ಕಳೆದರೂ ಕಾಮಗಾರಿ ಕಾರ್ಯಕತಗೊಂಡಿಲ್ಲ.

ಚರಂಡಿ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದೆ. ಆದರೂ ಪ್ರಯೋಜನವಾಗಿಲ್ಲ.
– ಪರಶುರಾಮ, ಗ್ರಾಮ ಪಂಚಾಯಿತಿ ಸದಸ್ಯ
ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ.
ಶಿವರಾಮ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.