ಬಳ್ಳಾರಿ: ಸಮಸ್ಯೆಗಳ ಗೂಡಾಗಿರುವ ಬಳ್ಳಾರಿ ಮಹಾನಗರ ಪಾಲಿಕೆಗೆ ಸದ್ಯ ಆಯುಕ್ತರೇ ಇಲ್ಲದಂತಾಗಿದೆ. ಹೊಸದಾಗಿ ನಿಯೋಜನೆಗೊಂಡವರ ಸ್ಥಿತಿ ಏನಾಗಲಿದೆ, ಹಿಂದಿನವರ ಕತೆ ಏನಾಗಲಿದೆ, ಹೊಸಬರು ಯಾರಾದರೂ ಬರುವರೇ, ಅಲ್ಲಿಯ ವರೆಗೆ ಪಾಲಿಕೆ ಆಡಳಿತದ ಗತಿ ಏನು ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ ಅವರು ಜೂನ್ 23ರಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ನಿಯೋಜನೆಗೊಂಡಿದ್ದರು. ಜೂನ್ 27ರಂದು ಅಧಿಕಾರ ಸ್ವೀಕರಿಸಲೆಂದು ಬಳ್ಳಾರಿಗೆ ಬಂದಿದ್ದ ಅವರು, ರಾಜಕೀಯ ನಾಯಕರೊಬ್ಬರ ವಿರೋಧದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಮತ್ತೆ ಬೆಳಗಾವಿಗೆ ಹಿಂದಿರುಗಿದ್ದಾರೆ.
‘ನೀವು ಅಧಿಕಾರ ಸ್ವೀಕರಿಸಬಾರದು’ ಎಂದು ರಾಜಕೀಯ ನಾಯಕರೊಬ್ಬರು ಅವರನ್ನು ಗದರಿಸಿ ಕಳುಹಿಸಿದರು ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಹೀಗಾಗಿ ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಆಯುಕ್ತರೂ ಇಲ್ಲ; ಈ ಹಿಂದೆ ಇದ್ದ ಆಯುಕ್ತರು ವರ್ಗಾವಣೆ ಪಟ್ಟಿ ಘೋಷಣೆಯಾದಾಗಿನಿಂದ ಕರ್ತವ್ಯಕ್ಕೂ ಬಂದಿಲ್ಲ.
ಸಾಮಾನ್ಯವಾಗಿ ರಾಜಕಾರಣಿಗಳು ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಿಕೊಂಡು ಬರುವುದು ವಾಡಿಕೆ. ಒಂದೊಂದು ಬಾರಿ ಸ್ಥಳೀಯ ನಾಯಕರ ಅಭಿಪ್ರಾಯ ಕೇಳಿ ಇಲಾಖೆಗಳು, ಸಚಿವರು ಅಧಿಕಾರಿಗಳನ್ನು ನಿಯೋಜನೆ ಮಾಡುತ್ತಾರೆ. ಸದ್ಯ ಆಫ್ರಿನ್ ಬಾನು ಅವರ ನಿಯೋಜನೆಯ ವೇಳೆ ಸ್ಥಳೀಯ ನಾಯಕರ ಒಪ್ಪಿಗೆಯನ್ನು ಸಚಿವರಾಗಲಿ, ಇಲಾಖೆಯಾಗಲಿ ಕೇಳಿಲ್ಲ. ಇದು ಅವರನ್ನು ಕೆರಳಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ಆಫ್ರಿನ್ ಬಾನು ಅಧಿಕಾರ ಸ್ವೀಕರಿಸಲು ನಾಯಕರು ಬಿಟ್ಟಿಲ್ಲ. ಹಲವರ ಪ್ರತಿಷ್ಠೆಗೆ ಸಿಲುಕಿ ಈಗಾಗಲೇ ಬಳ್ಳಾರಿಯ ಹಲವು ಸಂಸ್ಥೆಗಳು ಹಳ್ಳ ಹಿಡಿದಿವೆ. ಅದೇ ಗತಿ ಬಳ್ಳಾರಿ ಮಹಾನಗರ ಪಾಲಿಕೆಗೂ ಬಂದೊದಗಿದೆ.
ಆಯುಕ್ತರ ಕರ್ತವ್ಯಗಳೇನು?: ಪಾಲಿಕೆಯಲ್ಲಿ ಆಯುಕ್ತರೇ ನಿಭಾಯಿಸಬೇಕಾದ ಕರ್ತವ್ಯಗಳು, ಹೊಣೆಗಾರಿಕೆಗಳು, ಆಡಳಿತಾತ್ಮಕ ಕಾರ್ಯಗಳು ಇರುತ್ತವೆ. ಮಹಾನಗರ ಪಾಲಿಕೆಯ ನಿಧಿ, ಶುಲ್ಕಗಳು, ತೆರಿಗೆಗಳು ಮತ್ತು ನೀತಿಗಳನ್ನು ಕಾರ್ಯಗತಗೊಳಿಸುವುದು ಆಯುಕ್ತರ ಜವಾಬ್ದಾರಿ. ಹಣ ಪಾವತಿ, ಸಿಬ್ಬಂದಿಗೆ ಸಂಬಳವೂ ಅವರೇ ನೋಡಬೇಕು. ಮಹಾನಗರ ಪಾಲಿಕೆಗೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳುವ ಮತ್ತು ಇತರೆ ಸೇವೆಗಳನ್ನು ಪಡೆಯಲು ಕರೆಯುವ ಟೆಂಡರ್‌ಗಳು ಅವರ ಕೈಲಿರುತ್ತವೆ.
ಅನಧಿಕೃತ ನಿರ್ಮಾಣಗಳು, ಅತಿಕ್ರಮಣಗಳು, ಜಾಹೀರಾತುಗಳನ್ನು ತಡೆಯುವುದು, ನಗರಕ್ಕೆ ಎದುರಾಗುವ ಅಪಾಯಗಳನ್ನು ನಿಯಂತ್ರಿಸುವ ಅಧಿಕಾರ ಅವರದ್ದೇ ಆಗಿರುತ್ತದೆ.
ಜೂನ್ 23ರಂದು ಆಯುಕ್ತರಾಗಿ ನಿಯೋಜನೆಗೊಂಡಿದ್ದ ಆಫ್ರಿನ್ ಬಾನು ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯಲ್ಲೇ ಮುಂದುವರಿಕೆ
ನಾನು ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಆಗಿರುವುದರಿಂದ ಇಲ್ಲಿ ಹಲವು ಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಿ ಬರುವುದು ವಿಳಂಬವಾಗಿದೆಸಯೀದಾ ಆಫ್ರಿನ್ ಬಾನು ಬಳ್ಳಾರಿ ಕೆಎಎಸ್ ಅಧಿಕಾರಿ
ಮೇಯರ್ ಸ್ಥಾನವೂ ಕೋರ್ಟ್ ಅಂಗಣದಲ್ಲಿ
ಬಳ್ಳಾರಿ ಮಹಾನಗರ ಪಾಲಿಕೆಯ ಈಗಿನ ಮೇಯರ್ ಅವಧಿ ಜೂನ್ 21ಕ್ಕೇ ಮುಗಿದು ಹೋಗಿದೆ. ಚುನಾವಣೆಯ ಮೀಸಲಾತಿ ವಿಚಾರವು ಕೋರ್ಟ್ ಅಂಗಳದಲ್ಲಿ ಇರುವುದರಿಂದ ಈಗಿನ ಮೇಯರ್ ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.