ADVERTISEMENT

ಸಂಡೂರು: ಹತ್ತಿ ಬೆಳೆಗೆ ರಸ ಹೀರುವ ಕೀಟ ಬಾಧೆ

ಕೃಷಿ ವಿಜ್ಞಾನಿ, ಅಧಿಕಾರಿಗಳ ತಂಡ ಭೇಟಿ; ಬೆಳೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:10 IST
Last Updated 16 ಜುಲೈ 2025, 5:10 IST
ಸಂಡೂರು ತಾಲ್ಲೂಕಿನ ಕೊಡಾಲು ಗ್ರಾಮದ ರೈತರ ರೋಗಬಾಧಿತ ಹತ್ತಿ ಬೆಳೆಯ ಜಮೀನುಗಳಿಗೆ ಕೃಷಿ ಕೇಂದ್ರದ ವಿಜ್ಞಾನಿಗಳು, ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು
ಸಂಡೂರು ತಾಲ್ಲೂಕಿನ ಕೊಡಾಲು ಗ್ರಾಮದ ರೈತರ ರೋಗಬಾಧಿತ ಹತ್ತಿ ಬೆಳೆಯ ಜಮೀನುಗಳಿಗೆ ಕೃಷಿ ಕೇಂದ್ರದ ವಿಜ್ಞಾನಿಗಳು, ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು   

ಸಂಡೂರು: ತಾಲ್ಲೂಕಿನ ಕೊಡಾಲು ಗ್ರಾಮದ ರೈತರ ನೀರಾವರಿ ಜಮೀನುಗಳಲ್ಲಿ ಬೆಳೆದ ಹತ್ತಿ ಬೆಳೆಗೆ ರಸ ಹಿರುವ ಕೀಟಗಳ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರವಿ, ಮುಖ್ಯಸ್ಥ ಪಾಲಯ್ಯ, ಬಳ್ಳಾರಿಯ ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಅವರು ಸೋಮವಾರ ಭೇಟಿ ನೀಡಿ, ರೋಗ ಬಾಧಿತ ಹತ್ತಿ ಬೆಳೆಯನ್ನು ಪರಿಶೀಲಿಸಿ ರೈತರ ಜೊತೆ ಕೆಲ ಕಾಲ ಚರ್ಚಿಸಿದರು.

ವಿಜ್ಞಾನಿ ರವಿ ಮಾತನಾಡಿ, ‘ತೋರಣಗಲ್ಲು ಹೋಬಳಿಯಲ್ಲಿ ಈ ಬಾರಿ ಹತ್ತಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಸದರಿ ಬೆಳೆಯಲ್ಲಿ ಹಳದಿ – ಕೆಂಪು ಬಣ್ಣದ ಎಲೆಗಳು ಹೆಚ್ಚಾಗಿದ್ದು, ಬೆಳೆಯಲ್ಲಿ ಮೆಗ್ನಿಷಿಯಂ, ಬೋರಾನ್, ಪೋಟಾಶ್ ಪೋಷಕಾಂಶಗಳ ಕೊರತೆಯಿಂದ ರಸ ಹಿರುವ ಕೀಟಗಳ ಬಾಧೆ ಕಂಡುಬರುತ್ತಿದೆ. ಇದರ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಿಳಿಸಲಾಗುವುದು. ರೈತರು ಸಕಾಲಕ್ಕೆ ಬೆಳೆಯ ಪೋಷಣೆಯ ಬಗ್ಗೆ ಕೃಷಿ ಅಧಿಕಾರಿಗಳಿಂದ ಅಗತ್ಯ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು’ ಎಂದರು.

‘ಕೃಷಿ ಇಲಾಖೆಯ ವಿವಿಧ ಯೋಜನೆಗಳಾದ ಕೃಷಿ ಭಾಗ್ಯ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ, ಸಮಗ್ರ ಕೃಷಿ ಪದ್ಧತಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಬೆಳೆಯ ವಿಮೆ, ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕಿ ನದಾಫ್ ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ವೀರೇಶ, ತೋರಣಗಲ್ಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಆರ್.ಸಂತೋಷ, ಸಿಬ್ಬಂದಿ ಕವಿತಾ, ಜಿ.ಪಿ.ಧನಂಜಯ, ರೈತ ಮುಖಂಡ ಸುರೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.