ADVERTISEMENT

ಅಂತಿಮ ಹಂತದ ಸಿದ್ಧತೆ ಪೂರ್ಣ; ಹಕ್ಕು ಚಲಾವಣೆಗೆ ಕ್ಷಣಗಣನೆ

ಮತದಾನ: 1,480 ಮತಗಟ್ಟೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 11:37 IST
Last Updated 22 ಏಪ್ರಿಲ್ 2019, 11:37 IST
ಮತಯಂತ್ರ, ವಿ.ವಿ.ಪ್ಯಾಟ್‌ಗಳೊಂದಿಗೆ ಮತಗಟ್ಟೆಗೆ ಪಯಣ ಬೆಳೆಸಿದ ಚುನಾವಣಾ ಸಿಬ್ಬಂದಿ
ಮತಯಂತ್ರ, ವಿ.ವಿ.ಪ್ಯಾಟ್‌ಗಳೊಂದಿಗೆ ಮತಗಟ್ಟೆಗೆ ಪಯಣ ಬೆಳೆಸಿದ ಚುನಾವಣಾ ಸಿಬ್ಬಂದಿ   

ಹೊಸಪೇಟೆ: ಸಾರ್ವತ್ರಿಕ ಚುನಾವಣೆಗೆ ವಿಜಯನಗರ ಕ್ಷೇತ್ರದಲ್ಲಿ ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಚಲಾವಣೆಗೆ ಒಟ್ಟು 247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ವರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಒಟ್ಟು 1,480 ಜನ ಮತಗಟ್ಟೆಗಳಲ್ಲಿ ಕೆಲಸ ನಿರ್ವಹಿಸುವರು. ಮತದಾರರ ಮೇಲೆ ಪ್ರಭಾವ ಬೀರಬಹುದಾದ ಏಳು ಮತಗಟ್ಟೆಗಳನ್ನು ಗುರುತಿಸಿದ್ದು, ಅಲ್ಲಿ ಕೆ.ಎಸ್‌.ಆರ್‌.ಪಿ. ಭದ್ರತೆ ಕಲ್ಪಿಸಲಾಗಿದೆ.

ಒಟ್ಟು 37 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಅಲ್ಲಿ ಸ್ಥಳೀಯ ಪೊಲೀಸರ ಜತೆಗೆ ಕೇಂದ್ರೀಯ ಅರೆಸೇನಾ ಪಡೆ ಯೋಧರನ್ನು ನಿಯೋಜಿಸಿದೆ. ಭದ್ರತೆಯ ಮೇಲುಸ್ತುವಾರಿ ಜವಾಬ್ದಾರಿಯನ್ನು ಇಬ್ಬರು ಡಿ.ವೈ.ಎಸ್ಪಿ.ಗೆ ವಹಿಸಲಾಗಿದೆ. ಮೂವರು ಇನ್‌ಸ್ಪೆಕ್ಟರ್‌, ಏಳು ಜನ ಪಿ.ಎಸ್‌.ಐ., 25 ಎ.ಎಸ್‌.ಐ., 150 ಕಾನ್‌ಸ್ಟೆಬಲ್‌, 155 ಗೃಹರಕ್ಷಕರು, ಮೂರು ಡಿ.ಎ.ಆರ್‌. ಪ್ಲಟೂನ್‌, ಒಂದು ಕೆ.ಎಸ್‌.ಆರ್‌.ಪಿ. ತುಕಡಿ, 32 ಜನ ಕೇಂದ್ರೀಯ ಅರೆಸೇನಾ ಪಡೆ ಯೋಧರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವರು. 39 ಜನ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುವರು. 21 ಪೊಲೀಸ್‌ ಅಧಿಕಾರಿಗಳು ಗಸ್ತು ತಿರುಗುವರು.

ADVERTISEMENT

ಒಟ್ಟು 2,36,154 ಮತದಾರರಿದ್ದಾರೆ. ಈ ಪೈಕಿ 1,15,691 ಪುರುಷರು, 1,20,400 ಮಹಿಳೆಯರಿದ್ದಾರೆ. 63 ಇತರೆ ಮತದಾರರಿದ್ದಾರೆ. 330 ವಿ.ವಿ. ಪ್ಯಾಟ್‌ಗಳಿದ್ದು ಈ ಪೈಕಿ 83 ಹೆಚ್ಚುವರಿ ಇವೆ. 316 ಎಲೆಕ್ಟ್ರಾನಿಕ್‌ ಮತಯಂತ್ರಗಳಿದ್ದು, ಅದರಲ್ಲಿ 49 ಹೆಚ್ಚುವರಿಯಾಗಿವೆ. ಒಂದುವೇಳೆ ವಿ.ವಿ. ಪ್ಯಾಟ್‌, ಮತಯಂತ್ರಗಳಲ್ಲಿ ದೋಷ ಕಂಡು ಬಂದಲ್ಲಿ ಅವುಗಳನ್ನು ಬದಲಿಸಿ, ಹೆಚ್ಚುವರಿ ಯಂತ್ರಗಳನ್ನು ಉಪಯೋಗಿಸಿಕೊಂಡು ಸುಗಮವಾಗಿ ಮತದಾನ ಮುಂದುವರೆಯಲು ನೋಡಿಕೊಳ್ಳುವುದು ಅದರ ಉದ್ದೇಶವಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಎರಡು ವಾರಗಳಿಂದ ಸತತವಾಗಿ ಎಲೆಕ್ಟ್ರಾನಿಕ್‌ ಮತಯಂತ್ರ, ವಿ.ವಿ. ಪ್ಯಾಟ್‌ ಕುರಿತು ತರಬೇತಿ ನೀಡಲಾಗುತ್ತಿದೆ. ಸೋಮವಾರ ಬೆಳಿಗ್ಗೆ ನಗರ ಹೊರವಲಯದ ಸಂಡೂರು ರಸ್ತೆಯಲ್ಲಿರುವ ಲಿಟ್ಲ್‌ ಫ್ಲವರ್‌ ಶಾಲೆಯಲ್ಲಿ ಮತ್ತೊಮ್ಮೆ ಪ್ರಾಜೆಕ್ಟರ್‌ ಮೂಲಕ ಮಾಹಿತಿ ನೀಡಲಾಯಿತು. ಮಧ್ಯಾಹ್ನ ಊಟದ ನಂತರ ಮತಗಟ್ಟೆಗಳಿಗೆ ನೇಮಕಗೊಂಡ ಸಿಬ್ಬಂದಿಗೆ ವಿ.ವಿ.ಪ್ಯಾಟ್‌, ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಹಸ್ತಾಂತರಿಸಲಾಯಿತು. ಅವರೊಂದಿಗೆ ಪೊಲೀಸರು, ಗೃಹರಕ್ಷಕರು ಹಾಗೂ ಕೇಂದ್ರೀಯ ಅರೆಸೇನಾ ಪಡೆ ಯೋಧರು ವಿವಿಧ ಮಾರ್ಗಗಳಿಗೆ ನಿಯೋಜನೆಗೊಂಡಿದ್ದ 61 ಬಸ್ಸುಗಳಲ್ಲಿ ಪಯಣ ಬೆಳೆಸಿದರು.

ಸಿಬ್ಬಂದಿಗೆ ಬೆಳಿಗ್ಗೆ ಉಪ್ಪಿಟ್ಟು, ಚಹಾ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಪಾಯಸ, ಅನ್ನ, ಸಾಂಬಾರು ಹಾಗೂ ಮಜ್ಜಿಗೆ ಕಲ್ಪಿಸಲಾಗಿತ್ತು. ಬಿಸಿಲು ಹಾಗೂ ಶಕೆಯಿಂದ ಬಳಲಿ ಬೆಂಡಾಗಿದ್ದ ಚುನಾವಣಾ ಸಿಬ್ಬಂದಿ ಶಾಮಿಯಾನ ಹಾಗೂ ಮರದ ನೆರಳಿನ ಅಡಿಯಲ್ಲಿ ಕುಳಿತುಕೊಂಡಿರುವುದು ಕಂಡು ಬಂತು. ಕೆಲವು ಮಹಿಳಾ ಮತದಾರರು ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.