
ಬಳ್ಳಾರಿ: ಬೆಂಗಳೂರು ರಸ್ತೆಯಲ್ಲಿನ ಕಬರಸ್ತಾನ ಜಮೀನಿನ ಹಕ್ಕು ಬದಲಾವಣೆ ಪ್ರಕರಣ ಬಯಲಾದ ಬೆನ್ನಿಗೇ ಬಳ್ಳಾರಿ ನಗರದಲ್ಲಿ ಮತ್ತೊಂದು ಭೂ ಕಬಳಿಕೆ ಪ್ರಕರಣ ಬಹಿರಂಗವಾಗಿದೆ. ಈ ಸಂಬಂಧ ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಗಾಂಧಿನಗರ ಪೊಲೀಸರು ಕಂದಾಯ ಇಲಾಖೆಯ ಸರ್ವೇಯರ್‌ಗಳೂ ಸೇರಿದಂತೆ ಹಲವರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.
ನಗರದ ರೂಪನಗುಡಿ ರಸ್ತೆಯ, ಗ್ರ್ಯಾಂಡ್ ಫಂಕ್ಷನ್ ಹಾಲ್ ಎದುರಿನ 2 ಎಕರೆ 70 ಸೆಂಟ್‌ಗಳ ವಕ್ಫ್ ಆಸ್ತಿಗೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದೂ ಅಲ್ಲದೇ, ಅದೇ ದಾಖಲೆಗಳನ್ನು ಪಾಲಿಕೆಗೆ ಸಲ್ಲಿಸಿ ‘ನಮೂನೆ–2’ ಪಡೆಯಲು ಪ್ರಯತ್ನಿಸಿದ ಗೋವಿಂದರಾಜು ಎಂಬಾತನನ್ನು ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಮಾಡಲಾಗಿದೆ. ನಕಲಿ ನಕ್ಷೆಯನ್ನು ನೀಡಿರುವ ಭೂಮಾಪಕರನ್ನು ಎರಡನೇ ಆರೋಪಿಗಳನ್ನಾಗಿ ಮಾಡಲಾಗಿದೆ. ಜತೆಗೆ, ವಕ್ಫ್‌ನ ಈ ಆಸ್ತಿಯ ಕಬಳಿಕೆ ಪ್ರಯತ್ನದಲ್ಲಿ ಭಾಗಿಯಾದ ಇತರರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ.
ನಗರದ ಕೋರ್ಟ್ ಮೊಹಲ್ಲಾ ಮಸೀದಿಗೆ ಸೇರಿದ ಈ ಆಸ್ತಿಗೆ ‘ನಮೂನೆ–2’ ಕೋರಿ ಗೋವಿಂದರಾಜು ಎಂಬಾತ ಫೆ. 2ರಂದು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದ. ಈ ದಾಖಲೆಗಳನ್ನು ಪರಿಶೀಲಿಸಿದಾಗ ಜಮೀನು ಕೋರ್ಟ್ ಮೊಹಲ್ಲಾ ಮಸೀದಿ ಹೆಸರಲ್ಲಿರುವುದು ಬಹಿರಂಗವಾಗಿದೆ. ಜತೆಗೆ ಈ ಜಮೀನಿಗೆ ಪಡೆಯಲಾಗಿರುವ ನಕ್ಷೆಯು ಅನುಮೋದನೆಗೊಳ್ಳದಿರುವುದು, ನಕ್ಷೆಯನ್ನು ಹಿಂಪಡೆದಿರುವುದೂ ತಿಳಿದಿದೆ. ಈ ಜಮೀನಿಗೆ ನಮೂನೆ-2 ಹಾಗೂ ಮ್ಯುಟೇಷನ್‌ಗಳನ್ನು ಮಾಡಬಾರದೆಂದು ಪಾಲಿಕೆಗೆ ಪತ್ರ ಬರೆದಿರುವುದೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.