ADVERTISEMENT

ಹೊಸಪೇಟೆ: ಇನ್ನೂ ಜಮೆ ಆಗದ ಕೋವಿಡ್‌ ಪರಿಹಾರ

ಇನ್ನೂ ಪಡಿತರ ಸಿಗದೆ ಕಂಗಾಲಾಗಿರುವ ಜಿಲ್ಲೆಯ ಸಾವಿರಾರು ಕಟ್ಟಡ ಕಾರ್ಮಿಕರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ಏಪ್ರಿಲ್ 2020, 20:00 IST
Last Updated 10 ಏಪ್ರಿಲ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ: ಲಾಕ್‌ಡೌನ್‌ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಸರ್ಕಾರವು ಕೋವಿಡ್‌ ಪರಿಹಾರ ಘೋಷಿಸಿ ಹಲವು ದಿನಗಳೇ ಕಳೆದರೂ ಇದುವರೆಗೆ ಅವರ ಖಾತೆಗೆ ಪರಿಹಾರದ ಮೊತ್ತ ಜಮೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ₹1,000 ನೇರವಾಗಿ ಅವರ ಖಾತೆಗೆ ಜಮೆ ಮಾಡುವುದಾಗಿ ಘೋಷಿಸಿದ್ದವು. ಆದರೆ, ಇದುವರೆಗೆ ಜಿಲ್ಲೆಯಲ್ಲಿ ಆ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ. ಉದ್ಯೋಗ ಖಾತ್ರಿ ಸೇರಿದಂತೆ ಇತರೆ ಕೆಲಸಗಳು ನಿಂತು ಹೋಗಿರುವುದರಿಂದ ಅವರು ಮನೆಯಲ್ಲಿ ಕೂರುವಂತಾಗಿದೆ. ಇನ್ನೊಂದೆಡೆ ಪರಿಹಾರದ ಹಣ ಸೇರದ ಕಾರಣ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇದಿಷ್ಟೇ ಅಲ್ಲ, ಬಹುತೇಕ ಕಟ್ಟಡ ಕಾರ್ಮಿಕರಿಗೆ ಇದುವರೆಗೆ ಪಡಿತರ ಕೂಡ ಕೈಸೇರಿಲ್ಲ ಎಂದು ಗೊತ್ತಾಗಿದೆ. ಅದರಲ್ಲೂ ಇಡೀ ಜಿಲ್ಲೆಯಲ್ಲಿ ಹೊಸಪೇಟೆಯಲ್ಲಿ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ಪರಿಹಾರವೂ ಇಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಅನ್ನವೂ ಇಲ್ಲದಂತಹ ಭೀಕರ ಪರಿಸ್ಥಿತಿಯಲ್ಲಿ ದಿನ ಕಳೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ.

ADVERTISEMENT

ಬಳ್ಳಾರಿ ಜಿಲ್ಲೆಯೊಂದರಲ್ಲೇ ಲಕ್ಷಕ್ಕೂ ಅಧಿಕ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಈ ಪೈಕಿ 60,000 ಜನ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೊರೊನಾದಿಂದ ನಿರ್ಮಾಣವಾಗಿರುವ ತುರ್ತು ಸಂದರ್ಭದಲ್ಲಿ ನೋಂದಾಯಿತ ಹಾಗೂ ಹೆಸರು ನೋಂದಣಿ ಮಾಡಿಸದ ಎಲ್ಲಾ ಕಾರ್ಮಿಕರಿಗೂ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಅಷ್ಟೇ ಅಲ್ಲ, ಕಾರ್ಮಿಕ ಇಲಾಖೆಗೂ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಗೊತ್ತಾಗಿದೆ. ಇದನ್ನು ಅಧಿಕಾರಿಗಳೇ ದೃಢಪಡಿಸಿದ್ದಾರೆ. ಆದರೆ, ಅಧಿಕಾರಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವುದು ಕಾರ್ಮಿಕರ ಸಂಘಟನೆಗಳ ಆರೋಪ.

‘ಮುಂದಿನ ಎರಡು ತಿಂಗಳಿಗೆ ಸಾಕಾಗುವಷ್ಟು ಪಡಿತರ ವಿತರಿಸಬೇಕೆಂದು ಸರ್ಕಾರ ಸೂಚಿಸಿದೆ. ಹೀಗಿದ್ದರೂ ಕಟ್ಟಡ ಕಾರ್ಮಿಕರಿಗೆ ಅದು ತಲುಪಿಲ್ಲ. ಪಡಿತರ ವಿತರಣೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಬಹುತೇಕ ಕಟ್ಟಡ ಕಾರ್ಮಿಕರಿಗೆ ಸಿಕ್ಕಿಲ್ಲ. ಅರ್ಹರಿಗೆ ಸಿಗಬೇಕಾದದ್ದು ಏಕೆ ಸಿಗುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಎನ್. ಯಲ್ಲಾಲಿಂಗ ಪ್ರಶ್ನಿಸಿದ್ದಾರೆ.

‘ತುರ್ತು ಪರಿಸ್ಥಿತಿಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅವರು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಕಾರ್ಮಿಕರಿಗೆ ಪರಿಹಾರ ಧನ, ರೇಷನ್‌, ಹಾಲು ಸಮರ್ಪಕವಾಗಿ ತಲುಪುತ್ತಿದೆಯೋ ಇಲ್ಲವೊ ಎನ್ನುವುದನ್ನು ಪತ್ತೆ ಹಚ್ಚಬೇಕು. ಆದರೆ, ಆ ಕೆಲಸ ಮಾಡಿಲ್ಲ. ನಮ್ಮ ಸಂಘಟನೆಯಿಂದಲೇ ಎಲ್ಲೆಲ್ಲಿ ಕಾರ್ಮಿಕರಿಗೆ ಪರಿಹಾರ ತಲುಪಿಲ್ಲ ಎಂಬ ಮಾಹಿತಿ ಕೊಟ್ಟರೂ ಅವರ ನೆರವಿಗೆ ಧಾವಿಸಿಲ್ಲ’ ಎಂದು ಆರೋಪಿಸಿದರು.

‘ಪಡಿತರ ವಿತರಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎರಡ್ಮೂರು ತಿಂಗಳಿಗೆ ಸಾಕಾಗುವಷ್ಟು ಪಡಿತರ ಒಟ್ಟಿಗೆ ಕೊಡುತ್ತಿರುವುದರಿಂದ ಕೆಲವೆಡೆ ಸಮಸ್ಯೆ ಆಗುತ್ತಿರಬಹುದು. ಎಲ್ಲೆಡೆ ಲಾಕ್‌ಡೌನ್‌ ಇರುವುದರಿಂದ ನಮಗೂ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕಿಗೆ ಹೋದರೆ ಸರ್ಕಾರದಿಂದ ಹಣ ಜಮೆ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತದೆ. ಆದರೆ, ಹೋಗಲು ಆಗಿಲ್ಲ’ ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಅಲ್ತಾಫ್‌ ತಿಳಿಸಿದರು.

*
ಸರ್ಕಾರ ಕಟ್ಟಡ ಕಾರ್ಮಿಕರಿಗೆ ಪರಿಹಾರ ಘೋಷಿಸಿರುವುದು ನಿಜ. ಆದರೆ, ಇದುವರೆಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ.
–ಅಲ್ತಾಫ್‌, ಜಿಲ್ಲಾ ಕಾರ್ಮಿಕ ಅಧಿಕಾರಿ
*
ತುರ್ತು ಸ್ಥಿತಿಯಲ್ಲಿ ಕಾರ್ಮಿಕರ ನೆರವಿಗೆ ಬರುವುದು ಕಾರ್ಮಿಕ ಇಲಾಖೆಯ ಕರ್ತವ್ಯ. ಆದರೆ, ಆ ಇಲಾಖೆ ಕೈಚೆಲ್ಲಿ ಕೂತಿದೆ.
–ಎನ್‌. ಯಲ್ಲಾಲಿಂಗ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.