ADVERTISEMENT

ಕೋವಿಡ್‌ ಆರೈಕೆ ಕೇಂದ್ರ: ಸಾವಿರಾರು ಹಾಸಿಗೆ ಖಾಲಿ!

ಗ್ರಾಮೀಣ ಸೋಂಕಿತರಲ್ಲಿ ಹಿಂಜರಿಕೆ; ಮುಚ್ಚುವಂಥ ಸ್ಥಿತಿ ನಿರ್ಮಾಣ

ಕೆ.ನರಸಿಂಹ ಮೂರ್ತಿ
Published 5 ಜೂನ್ 2021, 22:40 IST
Last Updated 5 ಜೂನ್ 2021, 22:40 IST
ಸಂಡೂರು ತಾಲ್ಲೂಕಿನ ಹೊಸದರೋಜಿಯ ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಶುಕ್ರವಾರ ಇಬ್ಬರು ಸೋಂಕಿತರಷ್ಟೇ ಇದ್ದರು
ಸಂಡೂರು ತಾಲ್ಲೂಕಿನ ಹೊಸದರೋಜಿಯ ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಶುಕ್ರವಾರ ಇಬ್ಬರು ಸೋಂಕಿತರಷ್ಟೇ ಇದ್ದರು   

ಬಳ್ಳಾರಿ: ಜಿಲ್ಲಾಡಳಿತ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸಾವಿರಾರು ಹಾಸಿಗೆಗಳು ಖಾಲಿ ಉಳಿದಿವೆ. ಬಳ್ಳಾರಿ, ಸಂಡೂರು ಮತ್ತು ಸಿರುಗುಪ್ಪದ ಕೇಂದ್ರಗಳ ಪೈಕಿ ಕೆಲವೆಡೆ ಒಂದಂಕಿಯಷ್ಟು ಸೋಂಕಿತರು ದಾಖಲಾಗಿದ್ದು,ಮುಚ್ಚಬೇಕಾದ ಪರಿಸ್ಥಿತಿ ಇದೆ.ಖಾಸಗಿ ಕೇರ್‌ ಸೆಂಟರ್‌ಗಳೂ ಭಣಗುಡುತ್ತಿವೆ.

ವೈದ್ಯ–ಸಿಬ್ಬಂದಿ ಕೊರತೆ, ಆಪ್ತ ಸಮಾಲೋಚನೆ ಇಲ್ಲದಿರುವುದು, ಆಮ್ಲಜನಕ, ಊಟೋಪಚಾರದ ಅಸಮರ್ಪಕ ವ್ಯವಸ್ಥೆ ಬಗೆಗಿನ ಅಸಮಾಧಾನದಿಂದಾಗಿ ಹಲವರು ಕೇಂದ್ರಗಳಿಗೆ ದಾಖಲಾಗಲು ಹಿಂಜರಿಯುತ್ತಿದ್ದಾರೆ. ದಾಖಲಾಗಿರುವವರು ಕೊರತೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಕೆಲವೆಡೆ ಮಾತ್ರ ಇದಕ್ಕೆ ಅಪವಾದವೆಂಬಂಥ ಸನ್ನಿವೇಶಗಳಿವೆ.

ಆರೈಕೆ ಕೇಂದ್ರಗಳಾಗಿರುವ ವಿದ್ಯಾರ್ಥಿ ನಿಲಯಗಳು ಬಿಕೊ ಎನ್ನುತ್ತಿವೆ. ಬಾಡಿದ ತರಕಾರಿಗಳಿಂದ ಊಟ ತಯಾರಿಸಲಾಗುತ್ತಿದೆ. ಆರೈಕೆ ಕೇಂದ್ರದ ಸಮೀಪದ ಆರೋಗ್ಯ ಕೇಂದ್ರಗಳ ವೈದ್ಯರನ್ನು ಕೋವಿಡ್‌ ಆಸ್ಪತ್ರೆಗಳಿಗೆ ನಿಯೋಜಿಸಲಾಗಿದ್ದು, ಅಲ್ಲಿ ಶುಶ್ರೂಷಕರೇ ವೈದ್ಯರ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಆರೋಗ್ಯ ಕೇಂದ್ರ ಮತ್ತು ಆರೈಕೆ ಕೇಂದ್ರ ಒಂದೇ ಕಡೆ ಇರುವೆಡೆ ಮಾತ್ರ ವೈದ್ಯರ ಸೇವೆ ನಿರಂತರ ಲಭ್ಯವಿದೆ.

ಜಿಲ್ಲೆಯ ಕೆಲವು ಕೋವಿಡ್‌ ಆರೈಕೆ ಕೇಂದ್ರಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಈ ಅಂಶಗಳು ಕಂಡು ಬಂದವು.

ಸಂಡೂರು ತಾಲ್ಲೂಕಿನ ಹೊಸದರೋಜಿಗ್ರಾಮ ಪಂಚಾಯ್ತಿ ಕೇಂದ್ರದ ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ನಾಲ್ವರು ಸೋಂಕಿತರಿದ್ದರು. ಅವರಿಗೆ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದ್ದೆಡೆ ಒಣಗಿ ಮುರುಟಿದ್ದ ತರಕಾರಿಗಳಿದ್ದವು. ‘ಊಟ, ಉಪಾಹಾರ ಚೆನ್ನಾಗಿಲ್ಲ’ ಎಂದು ಸೋಂಕಿತರೊಬ್ಬರು ದೂರಿದರು.

‘ಸೋಂಕಿತರು ಅಸಮಾಧಾನ ವ್ಯಕ್ತಪಡಿಸಿದ ನಂತರ ಸಮಸ್ಯೆಯನ್ನು ಸರಿಪಡಿಸಲಾಗಿದೆ’ ಎಂದು ಹೆಸರು ಹೇಳಲು ಬಯಸದ ಪಂಚಾಯ್ತಿ ಸದಸ್ಯರೊಬ್ಬರು ತಿಳಿಸಿದರು.

ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಆರೈಕೆ ಕೇಂದ್ರ ಆರಂಭವಾದ ದಿನ ಹತ್ತು ಸೋಂಕಿತರಿದ್ದರು. ಆದರೆ ಊಟ–ಉಪಹಾರ ಪೂರೈಕೆಯ ಟೆಂಡರ್‌ ಪ್ರಕ್ರಿಯೆಯೇ ಮುಗಿದಿರಲಿಲ್ಲ. ಪಂಚಾಯ್ತಿ ಮತ್ತು ರೈತ ಸಂಘದ ಸಹಯೋಗದಲ್ಲಿ ಆಹಾರ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು.

ಎರಡು ವೈದ್ಯಕೀಯ ಆಮ್ಲಜನಕ ಸಾಂದ್ರಕಗಳಿದ್ದವು. ಅಲ್ಲಿಗೆ ದಮ್ಮೂರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿಯನ್ನು ನಿಯೋಜಿಸಲಾಗಿತ್ತು.

‘ಕೋವಿಡ್‌ ಕೇಂದ್ರದಲ್ಲಿರುವವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗುತ್ತದೆ. ಹೆಚ್ಚಿನ ಏರುಪೇರಾದರೆ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗುತ್ತದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಾಗರಾಜ್ ಹೇಳಿದರು.

ಕುರುಗೋಡು ತಾಲ್ಲೂಕಿನ ಎರ‍್ರಂಗಳಿಗಿ ಗ್ರಾಮದ ಹಾಸ್ಟೆಲ್‌ನಲ್ಲಿ ಸ್ಥಾಪಿಸಿರುವ ಕೋವಿಡ್‌ ಆರೈಕೆ ಕೇಂದ್ರದ ಬಗ್ಗೆ ಸಮೀಪದ ದಮ್ಮೂರು ಗ್ರಾಮಸ್ಥರು ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಲಿಲ್ಲ.

‘ವೈದ್ಯಕೀಯ ಆಮ್ಲಜನಕವಿಲ್ಲದೆ ಪರದಾಡಿದ್ದರಿಂದ ಜನ ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ, ರೈತ ಸಂಘದ ಪರಶುರಾಮ್‌ ಪ್ರತಿಪಾದಿಸಿದರು. ಸಿಬ್ಬಂದಿ ಇಲ್ಲದೆ ದಮ್ಮೂರಿನ ಆರೋಗ್ಯ ಉಪ ಕೇಂದ್ರವೂ ಮುಚ್ಚಿತ್ತು.

‘ಕರೂರಿನಲ್ಲಿ ಆರೈಕೆ ಕೇಂದ್ರವನ್ನು ಸ್ಥಾಪಿಸಿ ವೈದ್ಯ ಸಿಬ್ಬಂದಿಯನ್ನು ನೇಮಿಸಿದರೆ ಎಲ್ಲ ಖರ್ಚನ್ನೂ ಸಂಘವೇ ಭರಿಸಲು ಸಿದ್ಧ ಎಂಬ ನಮ್ಮ ಮನವಿಯನ್ನು ತಳ್ಳಿಹಾಕಿದ್ದ ಜಿಲ್ಲಾಧಿಕಾರಿ, ವೈದ್ಯರಿಲ್ಲ ಎಂದು ಹೇಳಿದ್ದರು. ಆದರೆ ಪ್ರತ್ಯೇಕ ವೈದ್ಯರಿಲ್ಲದ ಸ್ಥಿತಿಯಲ್ಲೇ ಜಿಲ್ಲಾಡಳಿತ ಆರೈಕೆ ಕೇಂದ್ರವನ್ನು ಆರಂಭಿಸಿರುವುದು ವಿಪರ್ಯಾಸ’ ಎಂದು ಕರೂರಿನವರೇ ಆಗಿರುವ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಆರ್‌.ಮಾಧವರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ಅರ್ಧ ದಿನ ಭರ್ತಿ ಕೆಲಸ

ಬಳ್ಳಾರಿ: ಗ್ರಾಮೀಣ ಪ್ರದೇಶಗಳಲ್ಲಿ ಸಿಬ್ಬಂದಿ ಕೊರತೆಯ ಕಾರಣದಿಂದಾಗಿ, ಪ್ರಸ್ತುತ ಇರುವ ಸಿಬ್ಬಂದಿಯೇ ದಿನವೂ 12 ಗಂಟೆ ಕಾಲ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶುಶ್ರೂಷಕರು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು ಸೇರಿದಂತೆ ತಳಮಟ್ಟದ ಎಲ್ಲರೂ ಈ ದೀರ್ಘ ಅವಧಿಯ ಕರ್ತವ್ಯದ ಭಾರ ಹೊತ್ತಿದ್ದಾರೆ. ಹಲವರು ಸೋಂಕಿನಿಂದ ಬಳಲಿ ಚೇತರಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಬಂದಿದ್ದಾರೆ. ವೈದ್ಯಾಧಿಕಾರಿಗಳ ಅನುಪಸ್ಥಿತಿಯಲ್ಲೇ ಇವರೆಲ್ಲರೂ ಗ್ರಾಮೀಣ ಜನಸಮುದಾಯದ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ವೈದ್ಯರಿಲ್ಲ, ಔಷಧಿಯುಂಟು

ಬಳ್ಳಾರಿ: ಜಿಲ್ಲಾಡಳಿತವು ಜಿಂದಾಲ್‌ ಸಹಯೋಗದಲ್ಲಿ ತೋರಣಗಲ್‌ನಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಆಸ್ಪತ್ರೆಗೆ ಹೊಸದರೋಜಿಯ ಆಯುಷ್‌ ವೈದ್ಯಾಧಿಕಾರಿ ಡಾ.ಫಣೀಂದ್ರ ಅವರನ್ನು ನಿಯೋಜಿಸಲಾಗಿದೆ. ಆಯುರ್ವೇದ ಚಿಕಿತ್ಸಾಲಯದ ನಾಲ್ಕನೇ ದರ್ಜೆ ನೌಕರರೊಬ್ಬರು ಔಷಧವನ್ನು ಕೊಡುತ್ತಿದ್ದರು.

ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮ ಪಂಚಾಯ್ತಿ ಕೇಂದ್ರದಲ್ಲೂ ಇದೇ ಪರಿಸ್ಥಿತಿ. ಪಂಚಾಯ್ತಿಯ ಶ್ರೀರಾಮರಂಗಪುರದ ಆರೋಗ್ಯ ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ.ರೇವಣಸಿದ್ದ ಅವರನ್ನು ಕಂಪ್ಲಿಯ ಕೋವಿಡ್‌ ಆರೈಕೆ ಕೇಂದ್ರಕ್ಕೆ ನಿಯೋಜಿಸಿರುವುದರಿಂದ ಸಿಬ್ಬಂದಿಯೇ ಔಷಧಿ ಕೊಡುತ್ತಿದ್ದರು.

ಬಳ್ಳಾರಿ ತಾಲ್ಲೂಕಿನ ಬೃಹತ್ ಕೈಗಾರಿಕಾ ಪ್ರದೇಶವಾದ ಕುಡುತಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿಚಂದ್ರ ಅವರನ್ನು ಬಳ್ಳಾರಿ ತುರ್ತು ಸ್ಪಂದನ ತಂಡಗಳ ನೇತೃತ್ವ ವಹಿಸಲು ನಿಯೋಜಿಸಿರುವುದರಿಂದ, ಆಯುಷ್‌ ವೈದ್ಯೆ ಡಾ.ಶಶಿಕಲಾ ಹಾಗೂ ಒಂದಿಬ್ಬರು ಸಿಬ್ಬಂದಿ ಕೇಂದ್ರದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.