ADVERTISEMENT

ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಗೊಲ್ಲರಹಳ್ಳಿಯಲ್ಲಿ ಕಾಳಿಕಾದೇವಿ ಜಾತ್ರಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 8:05 IST
Last Updated 30 ಮಾರ್ಚ್ 2020, 8:05 IST
   

ಹೊಸಪೇಟೆ: ಕೋವಿಡ್-19 ಹಿನ್ನೆಲೆ ಈಗಾಗಲೇ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಕೋರೊನಾ ವೈರಸ್ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ಹಾಗೂ ಅದರ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಆರ್ಪಿಸಿ ಸೆಕ್ಷನ್ 144 ಅನ್ವಯ ಕರ್ಪ್ಯೂ ಜಾರಿಗೊಳಿಸಲಾಗಿದ್ದರೂ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿಯಲ್ಲಿ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ(ವ:42),ಜಿ.ಬಿ.ನಾಗರಾಜ (50),ದಾಸರ ವೆಂಕಟೇಶ (46),ಕೋಮಾರಪ್ಪ(70),ಅನಂತಪ್ಪ ಡಿ.ಕೆ(58),ಸುರೇಶ ಮೈಲಪ್ಪ(36),ಕೆಂಚಪ್ಪ ಕಾಳಪ್ಪ(45),ಸಣ್ಣ ಹನುಮಂತಪ್ಪ(85),ನಾಗರಾಜ ಬನ್ನಿಯಪ್ಪ(40),ಈರಮ್ಮನವರ್ ಕೆಂಚಪ್ಪ(70),ಪುರ್ಲಿ ಕಾಳಶ್ರಪ್ಪ(40),ಸೋಮಪ್ಪ ಹುಚ್ಚಪ್ಪ(32),ಸುಣಗಾರ ದುರ್ಗೇಶ(37),ಗುರಿಕಾರ ಕಾಳಪ್ಪ ಮತ್ತು ಬಲವಂತಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಸದರಿ ಆರೋಪಿಗಳ ಮೇಲೆ ಸೆಕ್ಷನ್ 188,269,337 ಹಾಗೂ ಇನ್ನೀತರ ಸೆಕ್ಷನ್ ಗಳಡಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ 5ಜನಕ್ಕಿಂತ ಹೆಚ್ಚು ಜನ ಸೇರಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಪ್ರಾಣಕ್ಕೆ ಅಪಾಯಕಾರಿಯಾದ ಕರೋನಾ ವೈರಸ್ ಸಾಂಕ್ರಮಿಕ ರೋಗವು ಹರಡುತ್ತದೆ ಅಂತ ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ರಥವನ್ನು ಎಳೆದಿದ್ದು, ರಥವನ್ನು ಸಂಜೆ 6ರ ಸುಮಾರಿಗೆ ಎಳೆಯುವ ತೇರನ್ನು ಮಧ್ಯಾಹ್ನ 3:30ಕ್ಕೆ ಎಳೆಯಲಾಗಿದೆ. ರಥ ಎಳೆಯುವ ಸಮಯದಲ್ಲಿ ಗ್ರಾಮದ ಜಿ.ಬಿ.ನಾಗರಾಜ ಇವರ ಕಾಲಿನ ಮೇಲೆ ರಥದ ಚಕ್ರ ಹಾಯ್ದು ಕಾಲಿಗೆ ರಕ್ತಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಗ್ರಾಮದಲ್ಲಿ ಒಂದು ದಿನ ಮುಂಚೆ ತೆರಳಿ ರಥೋತ್ಸವ ಜರುಗಿಸದಂತೆ ಹಾಗೂ ಕೊರೊನಾ ವೈರಸ್ ಕುರಿತು ತಿಳಿವಳಿಕೆ ನೀಡಿ ಬರಲಾಗಿದೆ. ಆದರೂ ಮಾ.29ರಂದು ಆದೇಶ ಉಲ್ಲಂಘಿಸಿ ರಥೋತ್ಸವ ಜರುಗಿಸಲಾಗಿದೆ ಎಂದು ಡಣಾಯನಕೇರೆ ಪಿಡಿಒ ಜಿಲಾನ್ ರಜಾಕ್ ಸಾಬ್ ಅವರು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.