ADVERTISEMENT

ಲಾಠಿ ಹಿಡಿದು ಬೀದಿಗಿಳಿದ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 8:21 IST
Last Updated 30 ಮಾರ್ಚ್ 2020, 8:21 IST
   

ಹೊಸಪೇಟೆ: ಕೊರೊನಾ ಸೋಂಕು ಹರಡದಂತೆ ತಡೆಯಲು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಹಾಗೂ ಡಿವೈಎಸ್ಪಿ ವಿ. ರಘುಕುಮಾರ ಅವರು ಮನೆ ಮನೆಗೆ ತೆರಳಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಇನ್ನೊಂದೆಡೆ ಪ್ರಮುಖ ರಸ್ತೆಗಳಲ್ಲಿ ಸ್ವತಃ ಅವರೇ ಸಿಬ್ಬಂದಿಯೊಂದಿಗೆ ಲಾಠಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಬುದ್ಧಿಮಾತು ಕೇಳದವರಿಗೆ ಬೆತ್ತದ ರುಚಿ ತೋರಿಸಿ ಕಳುಹಿಸುತ್ತಿದ್ದಾರೆ. ತಡರಾತ್ರಿಯೂ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡಿ ಪರಿಸ್ಥಿತಿ ಪರಿಶೀಲಿಸಿದರು.

ನಗರದ ಉಕ್ಕಡಕೇರಿ, ಚಿತ್ರಕೇರಿ, ಬಾಣದಕೇರಿ ಸೇರಿದಂತೆ ಇತರೆ ಕಡೆಗಳಲ್ಲಿ ಮನೆ ಮನೆಗೆ ತೆರಳಿ, ‘ಲಾಕ್‌ಡೌನ್‌ ಇರುವುದರಿಂದ ಯಾರೂ ಕೂಡ ಅನಗತ್ಯವಾಗಿ ಹೊರಗೆ ಓಡಾಡಬಾರದು. ಅನೇಕ ಜನ ಕ್ವಾರಂಟೈನ್‌ನಲ್ಲಿದ್ದಾರೆ. ಆ ಅವಧಿ ಮುಗಿಯುವವರೆಗೆ ಮನೆಯಿಂದ ಹೊರಗೆ ಬರದಿರುವುದು ಉತ್ತಮ. ಯಾರಿಗಾದರೂ ಒಬ್ಬರಿಗೆ ಸೋಂಕು ತಗುಲಿದರೆ ಮನೆ ಮಂದಿ, ಸುತ್ತಮುತ್ತಲಿನವರು ತಗುಲಬಹುದು’ ಎಂದು ಹೇಳಿದರು.

ADVERTISEMENT

‘ಕೇರಿಗಳ ಯಜಮಾನರು, ಮನೆಯ ಮುಖ್ಯಸ್ಥರು ಕುಟುಂಬ ಸದಸ್ಯರಿಗೆ ತಿಳಿಹೇಳಿ ಮನೆಯಲ್ಲಿರುವಂತೆ ತಿಳಿಸಬೇಕು. ಅದರಲ್ಲೂ ಯುವಕರಿಗೆ ಬುದ್ಧಿಮಾತು ಹೇಳಬೇಕು. ಕರ್ಫ್ಯೂ ಜಾರಿಯಲ್ಲಿದ್ದು, ಹೊರಗೆ ಮೂರ್ನಾಲ್ಕು ಜನ ಓಡಾಡಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಅದಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದು ಉತ್ತಮ. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿದ್ದು, ಅಷ್ಟರೊಳಗೆ ಎಲ್ಲಾ ಕೆಲಸ ಮುಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.