ADVERTISEMENT

ಬಳ್ಳಾರಿ | ಒಳಮೀಸಲಾತಿ ಒಳಬೇಗುದಿ: ಮುಖಂಡರಿಂದ ಕೇಳಿ ಬಂತು ಪರ–ವಿರೋಧ ಅಭಿಪ್ರಾಯ

ಆರ್. ಹರಿಶಂಕರ್
Published 21 ಆಗಸ್ಟ್ 2025, 5:02 IST
Last Updated 21 ಆಗಸ್ಟ್ 2025, 5:02 IST
ಕರಿಯಪ್ಪ ಗುಡಿಮನಿ 
ಕರಿಯಪ್ಪ ಗುಡಿಮನಿ    

ಬಳ್ಳಾರಿ: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಕೈಗೊಂಡಿರುವ ಸಂಪುಟ ನಿರ್ಧಾರಕ್ಕೆ ಬಳ್ಳಾರಿಯಲ್ಲಿ ದಲಿತ ಸಮುದಾಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಲವಾದಿ, ಹೊಲೆಯ ಮತ್ತು ಇತರ ಜಾತಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಿವೆ. ಆದರೆ, ಮಾದಿಗರು ಮತ್ತು ಅಲೆಮಾರಿಗಳು ಮೀಸಲಾತಿ ವರ್ಗೀಕರಣವನ್ನು  ವಿರೋಧಿಸುತ್ತಿದ್ದಾರೆ. ಅಲೆಮಾರಿ ಸಮುದಾಯದ ಮುಖಂಡರಂತೂ ಇದು ನಮಗೆ ಮಾಡಿದ ಅನ್ಯಾಯ ಎಂದು ಹೇಳುತ್ತಿದ್ದು, ಹೋರಾಟಕ್ಕೆ ಮುಂದಾಗುವ ಲಕ್ಷಣಗಳು ಕಾಣಿಸಿವೆ. 

2011ರ ಜನಗಣತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 517409 ಆಗಿದ್ದು, ಒಟ್ಟು ಜನಸಂಖ್ಯೆಯ ಶೇ 21.10 ಆಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಕೇಳಿ ಬಂದಿರುವ ಈ ಅಭಿಪ್ರಾಯವು ಸಹಜವಾಗಿಯೇ ಪ್ರಮುಖ್ಯತೆ ಪಡೆದಿದೆ. 

ADVERTISEMENT

ಯಾರು ಏನಂತಾರೆ?: ವೋಟ್‌ ಬ್ಯಾಂಕ್‌ ಮೀಸಲಾತಿ: ಸಂಪುಟದ ತೀರ್ಮಾನವು ವೋಟ್‌ ಬ್ಯಾಂಕ್‌ ಆಧಾರಿತ ಎಂದು ‘ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ’ಯ ಮುಖಂಡ ಕರಿಯಪ್ಪ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜನಸಂಖ್ಯೆ ಗಮನಸಿದರೆ ಮಾದಿಗ ಮತ್ತು ಇತರ ಜಾತಿಗಳಿಗೆ ಶೇ 7ರಷ್ಟು ಮೀಸಲಾತಿ ಸಿಗಬೇಕಿತ್ತು. ಪ್ರಮುಖವಾಗಿ ಅಲೆಮಾರಿಗಳಿಗೆ ಅನ್ಯಾಯ ಆಗಿದೆ. ನಾಗಮೋಹನದಾಸ್‌ ಆಯೋಗವೇ ಅವರನ್ನು ಪ್ರತ್ಯೇಕಿಸಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ಬಲಿಷ್ಠರ ಗುಂಪಿಗೆ ಸೇರಿಸಲಾಗಿದೆ’ ಎಂದಿದ್ದಾರೆ. 

‘ಅಲೆಮಾರಿಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.  

ತೃಪ್ತಿ ತರದ ತೀರ್ಮಾನ:

ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ತೀರ್ಮಾನ  ನಮಗಂತೂ ತೃಪ್ತಿ ತಂದಿಲ್ಲ ಎಂದು ರಾಜ್ಯ ‘ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಸಂಘಟನೆಗಳ‌ ಒಕ್ಕೂಟ’ದ ರಾಜ್ಯ ಪ್ರಧಾನ ಸಂಚಾಲಕ ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ. 

‘ಜನಸಂಖ್ಯೆ ದೃಷ್ಟಿಯಲ್ಲಿ ಮಾದಿಗ ಮತ್ತು ಇತರ ಜಾತಿಗಳು, ಹೊಲೆಯ ಮತ್ತು ಇತರ ಜಾತಿಗಳಿಗಿಂತಲೂ 6ರಿಂದ 7 ಲಕ್ಷ ಜಾಸ್ತಿ ಇವೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳು ನಮ್ಮವರೇ ಆಗಿದ್ದರೂ, ಹೊಲೆಯ ಮತ್ತು ಇತರ ಜಾತಿಗಳಲ್ಲಿ ಸೇರಿಸಲಾಗಿದೆ. ಈ ಮೂಲಕ ಅವರ ಸಂಖ್ಯೆ ಹೆಚ್ಚಿಸಲಾಗಿದೆ. ಒಳ ಮೀಸಲಾತಿ ವಿರೋಧ ಮಾಡುತ್ತಿದ್ದವರಿಗೆ ಮಣಿದು ಈ ಮೀಸಲು ವರ್ಗೀಕರಣ ಮಡಲಾಗಿದೆ. ನಮಗೆ ಶೇ. 7ರ ಮೀಸಲಾತಿ ದಕ್ಕಬೇಕಾಗಿತ್ತು‘ ಎಂದುಅವರು ಹೇಳಿದ್ದಾರೆ.    

ಒಳಮೀಸಲಾತಿ ಹೋರಾಟ ಮಾಡಿಕೊಂಡು ಬಂದವರೇ ಮಾದಿಗರು. ಆದರೆ, ನಮಗೇ ಅನ್ಯಾಯವಾಗಿದೆ. ಹೊಟ್ಟೆ ತುಂಬಿದವರು ತ್ಯಾಗ ಮಾಡಬೇಕು ಎಂದು ನಾಗಮೋಹನದಾಸ್‌ ಆಯೋಗವೇ ಹೇಳಿತ್ತು. ಇಲ್ಲಿ ಯಾರು ತ್ಯಾಗ ಮಾಡಿದ್ದಾರೆ? ವಂಚನೆ ಯಾರಿಗೆ ಆಗಿದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ಯಾರಿಗೂ ಅನ್ಯಾಯವಾಗಿಲ್ಲ:

ಸರ್ಕಾರದ ತೀರ್ಮಾನದಲ್ಲಿ ಮಾದಿಗರಿಗೆ ಅನ್ಯಾಯವಾಗಿಲ್ಲ. ಮಾದಿಗರೂ ಸೇರಿ 23 ಜಾತಿಗಳಿಗೆ ಶೇ 6ರ ಮೀಸಲಾತಿ, ಹೊಲೆಯ ಸೇರಿ 50 ಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ನೀಡಲಾಗಿದೆ. ಎರಡೂ ಕಡೆಯೂ ಒಂದೇ ಪ್ರಮಾಣದ ಜನ ಸಂಖ್ಯೆ ಇದೆ ಎಂದು  ಬಾಬು ಜಗಜೀವನ್‌ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಎಡಗೈ ಮುಖಂಡ ಮುಂಡ್ರಿಗಿ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. 

 

ಬಿಜೆಪಿ ವಿನಾ ಕಾರಣ ರಾಜಕೀಯ ಮಾಡುತ್ತಿದೆ. ಒಳಮೀಸಲಾತಿ ಹೋರಾಟದಲ್ಲಿ ಬಿಜೆಪಿ ಎಂದೂ ಸಕ್ರಿಯವಾಗಿರಲಿಲ್ಲ. ಸದ್ಯ ಮೀಸಲಾತಿ ವರ್ಗೀಕರಣ ವಿರೋಧಿಸಿದರೆ ಉಪ ಸಮಿತಿ ರಚನೆಯಾಗುವ ಅಪಾಯಗಳಿವೆ ಎಂದು ಅವರು ಎಚ್ಚರಿಸಿದರು.  

ತೀರ್ಮಾನಕ್ಕೆ ಸ್ವಾಗತ:

ಸರ್ಕಾರದ ತೀರ್ಮಾನವೇನೋ ಸರಿ ಇದೆ. ನಾಗಮೋಹನ ದಾಸ್‌ ಆಯೋಗ ಪ್ರವರ್ಗಗಳನ್ನು ಸೃಷ್ಟಿಸಿದ್ದು, ಗೊಂದಲ, ಟೀಕೆಗಳಿಗೆ ಗುರಿಯಾಗಿತ್ತು. ಆದರೆ, ಸರ್ಕಾರ ಅವುಗಳನ್ನು ಮೀರಿ ಸೂಕ್ತ ತೀರ್ಮಾನ ಕೈಗೊಂಡಿದೆ ಎಂದು ಬಲಗೈ ಮುಖಂಡ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಸಂತರಾಜ್‌ ಕಹಳೆ ಅಭಿಪ್ರಾಯಪಟ್ಟಿದ್ದಾರೆ.  

ವಸಂತ ಕುಮಾರ್‌ ಕಹಳೆ

ಅಲೆಮಾರಿ ಸಮುದಾಯಗಳನ್ನು ಬಲಿಷ್ಟರೊಂದಿಗೆ ಸೇರಿಸಿದ್ದು ಸರಿಯಲ್ಲ. ಅಲೆಮಾರಿಗಳು ಸಾಮಾಜಿಕ, ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದಾರೆ. ಸರ್ಕಾರದ ಸವಲತ್ತು ಪಡೆಯುವ ಧೈರ್ಯ ಅವರಿಗೆ ಇನ್ನೂ ಬಂದಿಲ್ಲ. ಈ ಬಗ್ಗೆ ಸರ್ಕಾರ ಪರಾಮರ್ಶೆ ಮಾಡಬೇಕು ಎಂದಿದ್ದಾರೆ.

ಹನುಮಂತಪ್ಪ 
‘ವಿಷ ಕೊಡಬಹುದಿತ್ತು’
ನಾಗಮೋಹನ್‌ ದಾಸ್‌ ವರದಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳಿಗೆ ಶೇ 1ರ ಮೀಸಲಾತಿ ನೀಡಲಾಗಿತ್ತು. ಆದರೆ ಈಗ ಮೇಲ್ವರ್ಗದ ಸಮುದಾಯಗಳೊಂದಿಗೆ ಸೇರಿಸಲಾಗಿದೆ. ಈಗ ಶೇ 10ರ ಮಿಸಲಾತಿ ಕೊಟ್ಟರೂ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ. ಯಾವುದೇ ಕಾರಣಕ್ಕೂ ನಾವು ಅವರೊಂದಿಗೆ ನಾವು ಸೇರುವುದಿಲ್ಲ. ಮೀಸಲಾತಿ ಕೊಡದಿದ್ದರೂ ಚಿಂತೆ ಇಲ್ಲ. ಭಿಕ್ಷೆ ಬೇಡಿ ಬದುಕುತ್ತೇವೆಯೇ ಹೊರತು ಇಂಥ ಅನ್ಯಾಯ ಸಹಿಸುವುದಿಲ್ಲ. ಸರ್ಕಾರ ಹೀಗೆ ಮಾಡುವ ಬದಲು ವಿಷ ಕೊಡಬಹುದಿತ್ತು ಎಂದು  ರಾಜ್ಯ ಎಸ್‌ಸಿಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್‌ ಹೇಳಿದ್ದಾರೆ.
ಶಿವಕುಮಾರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.