ಹೊಸಪೇಟೆ (ವಿಜಯನಗರ): ದರೋಜಿ ಕರಡಿಧಾಮದಲ್ಲಿ ಪಂಜರದಂತಹ ಸ್ಥಳ ದಲ್ಲಿ (ಹೈಡ್) ನಿಂತು ಕರಡಿಗಳ ಫೋಟೊ ತೆಗೆಯಲು ಅಥವಾ ವಿಡಿಯೊ ಚಿತ್ರೀಕರಣ ಮಾಡಲು ಇದ್ದ ಅವಕಾಶ ಕಳೆದ ಕೆಲವು ದಿನಗಳಿಂದ ಸಂಪೂರ್ಣ ರದ್ದಾಗಿದ್ದು, ಛಾಯಾಗ್ರಾಹಕರು ಕಂಗೆಟ್ಟಿದ್ದಾರೆ.
ಈಚೆಗೆ ಅತಿ ಗಣ್ಯರ ತಂಡವೊಂದು ಕರಡಿಧಾಮಕ್ಕೆ ಭೇಟಿ ಕೊಟ್ಟಿತ್ತು. ಹೈಡ್ ನಿಂದ ಹೊರಗಡೆ ನಿಂತು, ಕರಡಿಗಳು ಸಮೀಪದ ಬಂಡೆಗಳ ಮೇಲೆ ಆಹಾರ ಸೇವಿಸುತ್ತಿದ್ದುದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯೂಬ್‌ಗೆ ಹಾಕಿ ಕೊಂಡಿದ್ದರು. ಇದು ವೈರಲ್ ಆಗಿದ್ದರಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
‘ನಾವು ಪ್ರವಾಸಿಗರಿಗೆ ಹಂಪಿ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ, ಪ್ರಾಣಿ, ಪಕ್ಷಿಗಳ ಕುರಿತು ಮಾಹಿತಿ ನೀಡುವವರು ಮತ್ತು ಅಗತ್ಯ ಇದ್ದವರಿಗೆ ಫೋಟೊ, ವಿಡಿಯೊ ಮಾಡಿ ಕೊಡುವವವರು. ಅಪಾಯಕಾರಿ ಸ್ಥಳದಲ್ಲಿ ಹುಚ್ಚಾಟ ಮಾಡಿ ಹೋದವರು ಹೋಗಿಬಿಟ್ಟರು, ನಾವು ಏನು ತಪ್ಪು ಮಾಡಿದ್ದೇವೆ ಎಂದು ನಮ್ಮನ್ನು ನಿರ್ಬಂಧಿಸಲಾಗಿದೆ? ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದ ಪ್ರಸಂಗವಲ್ಲವೇ?’ ಎಂದು ಛಾಯಾಗ್ರಾಹಕ ಪಂಪಯ್ಯ ಮಳಿಮಠ್ ಅವರು ‘ಪ್ರಜಾವಾಣಿ’ ಬಳಿ ತಮ್ಮ ಅಳಲು ತೋಡಿಕೊಂಡರು.
‘ದರೋಜಿಯಲ್ಲಿರುವುದು ಏಷ್ಯಾದ ಮೊದಲ ಕರಡಿಧಾಮ. ನಿತ್ಯ ಎರಡು ಹೊತ್ತು ಇಲ್ಲಿ ಬೆಲ್ಲ ಬೆರೆಸಿದ ಆಹಾರವನ್ನು ಬಂಡೆಗಳಿಗೆ ಹಚ್ಚಿ ಕರಡಿಗಳಿಗೆ ಆಹ್ವಾನ ನೀಡಲಾಗುತ್ತದೆ. ಕೆಲವೊಮ್ಮೆ ನಾಲ್ಕಾರು ಕರಡಿಗಳು ಬರುವುದೂ ಇದೆ, ಕೆಲವೊಮ್ಮೆ ಒಂದೇ ಒಂದು ಕರಡಿ ಬರದೆ ಇರುವುದೂ ಇದೆ. ಆದರೂ ಪ್ರವಾಸಿಗರಿಗೆ ಕುತೂಹಲ ಇದ್ದೇ ಇರುತ್ತದೆ, ಅವರಿಗೆ ನಿರಾಸೆ ತರಿಸುವುದು ಸರಿಯಲ್ಲ. ಛಾಯಾಗ್ರಹಣ ನಿರ್ಬಂಧ ತಕ್ಷಣ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.
ಸುರಕ್ಷತೆ ಮುಖ್ಯ: ‘ಪ್ರವಾಸಿಗರ ಸುರಕ್ಷತೆ ನಮಗೆ ಬಹಳ ಮುಖ್ಯವಾಗುತ್ತದೆ. ಸಫಾರಿ ವಾಹನದಲ್ಲಿ ಮಾತ್ರ ಫೋಟೊ, ವಿಡಿಯೊ ತೆಗೆಯಲು ಅವಕಾಶ ಇದೆ. ಹೈಡ್‌ನೊಳಗೆಯೇ ನಿಂತು ಕರಡಿಗಳನ್ನು ನೋಡಬೇಕೆಂಬ ನಿಯಮವೂ ಇದೆ. ಕೆಲವರು ಆ ನಿಮಯ ಉಲ್ಲಂಘಿಸಿದ್ದಕ್ಕೇ ಈ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದೇವೆ, ಯಾರಿಗೂ ಅವಕಾಶ ನೀಡುತ್ತಿಲ್ಲ. ಮೇಲಧಿಕಾರಿಗಳ ಸೂಚನೆಯಂತೆ ಮುಂದಿನ ದಿನಗಳಲ್ಲಿ ನಾವು ನಡೆದುಕೊಳ್ಳುತ್ತೇವೆ’ ಎಂದು ಕರಡಿಧಾಮದ ಮೂಲಗಳು ತಿಳಿಸಿವೆ.
ದರೋಜಿ ಕರಡಿಧಾಮದಲ್ಲಿ ಕರಡಿಯಷ್ಟೇ ಅಲ್ಲ, ಚಿರತೆಗಳು, ಹೈನಾಗಳೂ ಇವೆ. ಸಫಾರಿ ವಾಹನಗಳಿಂದ ಇಳಿಯುವುದು ಅಪಾಯಕಾರಿ. ಯಾವ ಸಂದರ್ಭದಲ್ಲಿ ದಾಳಿ ಮಾಡುತ್ತವೆ ಎಂದು ಹೇಳಲಾಗದು. ಹೀಗಾಗಿ ಪ್ರವಾಸಿಗರು ಸಫಾರಿ ವಾಹನದಿಂದ ಇಳಿದು ಹೋಗಬಾರದು ಎಂಬು ನಿಯಮವನ್ನು ಹಲವು ವರ್ಷಗಳಿಂದಲೂ ಪಾಲಿಸಲಾಗುತ್ತಿದೆ. ಆದರೆ ಕರಡಿಗಳಿಗೆ ಆಹಾರ ಹಾಕುವ ಸ್ಥಳದಲ್ಲಿ ಕೆಲವರು ಮಾಡುವ ಹುಚ್ಚಾಟ ಇದೀಗ ಭಾರಿ ಬೆಲೆ ತೆರುವಂತೆ ಮಾಡಿದೆ.
ಈ ಬಗ್ಗೆ ಡಿಸಿಎಫ್ ಅವರನ್ನು ಸಂಪರ್ಕಿಸ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.
ಒಂದೆರಡು ದಿನದಲ್ಲಿ ನಿರ್ಧಾರ ಸಾಧ್ಯತೆ:
ದರೋಜಿಯಲ್ಲಿ ಇದುವರೆಗೆ ಫೋಟೊ, ವಿಡಿಯೋಗ್ರಫಿಗೆ ನಿರ್ಬಂದ ಇರಲಿಲ್ಲ. ಸಫಾರಿ ವಾಹನಕ್ಕೆ ₹3 ಸಾವಿರ ಪಾವತಿಸಿ (ಗರಿಷ್ಠ 10 ಮಂದಿಗೆ ತಲಾ ₹300 ದರ), ಫೋಟೊ, ವಿಡಿಯೊಕ್ಕೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಿ ಅಥವಾ ಮೊಬೈಲ್‌ನಲ್ಲೇ ಫೋಟೊ, ವಿಡಿಯೊ ತೆಗೆಯುವ ಕಾಯಕದಲ್ಲಿ ಹಲವು ವೃತ್ತಿಪರ ಛಾಯಾಗ್ರಾಹಕರು, ಪ್ರವಾಸಿ ಮಾರ್ಗದರ್ಶಿಗಳು ಇಲ್ಲಿದ್ದಾರೆ, ಇದೀಗ ಅವರ ಅನ್ನಕ್ಕೆ ಕಲ್ಲು ಬಿದ್ದಿದೆ. ಎರಡು ದಿನದಲ್ಲಿ ಮೇಲಧಿಕಾರಿಗಳು ಸೂಕ್ತ ನಿರ್ಧಾರ ಪ್ರಕಟಿಸಬಹುದು ಎಂಬ ಆಶಾಭಾವನೆಯಲ್ಲಿ ಅವರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.