ADVERTISEMENT

ಜಿಂದಾಲ್‌ನಲ್ಲಿ ಸೊಂಕು ಹರಡದಂತೆ ಕ್ರಮಕ್ಕೆ ಬಳ್ಳಾರಿ ಡಿಸಿ ನಕುಲ್ ಸೂಚನೆ

ಜಿಂದಾಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಕುಲ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:16 IST
Last Updated 10 ಜೂನ್ 2020, 13:16 IST
ಬಳ್ಳಾರಿ ಜಿಲ್ಲಾಧಿಕಾರಿ ನಕುಲ್
ಬಳ್ಳಾರಿ ಜಿಲ್ಲಾಧಿಕಾರಿ ನಕುಲ್   

ಬಳ್ಳಾರಿ: ಜಿಂದಾಲ್‌ನಲ್ಲಿ ಕೊರೊನಾ ಸೊಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಜಿಂದಾಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೊರೊನಾ ಕುರಿತು ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಖಾನೆಯಲ್ಲಿ ಕೊರೊನಾ ಕುರಿತ ಮಾಹಿತಿ ಗಳನ್ನು ಸಿಬ್ಬಂದಿಗೆ ಎಸ್ಎಂಎಸ್ ಮತ್ತು ಟ್ವೀಟರ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೀಡಬೇಕು ಎಂದು ಅವರು ಬುಧವಾರ ತಮ್ಮ ಕಚೇರಿಯಲ್ಲಿ ಜೂಮ್ ಆಪ್ ಮೂಲಕ ವಿಡಿಯೋ ಸಂವಾದ ನಡೆಸಿ ಸೂಚಿಸಿದರು.

30 ಸಾವಿರ ಸಿಬ್ಬಂದಿ ಜಿಂದಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಪ್ರತಿನಿತ್ಯ ಕೊರೊನಾ ಕುರಿತ ಮಾಹಿತಿ ಒದಗಿಸಬೇಕು. ಕಂಟ್ರೋಲ್ ರೂಂ ಸ್ಥಾಪಿಸಿ ಕೊರೊನಾ ಸಂಬಂಧಿತ ಸಂದೇಹ ಹಾಗೂ ಗೊಂದಲಗಳನ್ನು ನಿವಾರಿಸಬೇಕು ಸೂಚಿಸಿದರು.

ADVERTISEMENT

ಜ್ವರ, ಕೆಮ್ಮು, ಶೀತದಂತ ಲಕ್ಷಣಗಳು ಕಂಡುಬಂದಲ್ಲಿ ಹಾಗೂ ಉಸಿರಾಟದ ಸಮಸ್ಯೆ ಇರುವವರು ಮೂಗು ಮತ್ತು ಗಂಟಲುದ್ರವ ಸಂಗ್ರಹಿಸಿ ವಿಮ್ಸ್ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು‌ ಸ್ಪಷ್ಟಪಡಿಸಿದರು.

ಜಿಂದಾಲ್‌ನಲ್ಲಿರುವ ಮಾಹಿತಿ ಪ್ರಸರಣ ಚಟುವಟಿಕೆಗಳನ್ನು ಬಲಪಡಿಸಬೇಕು ಎಂದರು.

ಸೊಂಕಿರತೊಂದಿಗೆ ಸಂಪರ್ಕವುಳ್ಳವರಿಗೆ ಐಸೋಲೇಶನ್: ಜಿಂದಾಲ್ ನ ಸಿಎಂಡಿ ಮತ್ತು ಕೋರೆಕ್ಸ್ ವಿಭಾಗಗಳಲ್ಲಿ ಕೊರೊನಾ ಸೊಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿರುವವರನ್ನು ಗುರುತಿಸಿ ಅವರನ್ನು ಈಗಾಗಲೇ ಪ್ರತ್ಯೇಕಗೊಳಿಸಿ ಐಸೋಲೇಶನ್ ನಲ್ಲಿಡಲಾಗಿದೆ ಎಂದು‌ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇವರೆಲ್ಲರೂ ಒಂದೇ ಕಚೇರಿ ಜಾಗವನ್ನು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸಿಎಂಡಿಯಲ್ಲಿ ಶೇ.95ರಷ್ಟು ಜನರನ್ನು ಅಂದರೆ 87 ಜನರಲ್ಲಿ 83 ಜನರನ್ನು ಪ್ರತ್ಯೇಕಿಸಲಾಗಿದ್ದು, ಪ್ರಸ್ತುತ, ನಾಲ್ವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಕೊರೆಕ್ಸ್ ನ 228 ಮಂದಿಯಲ್ಲಿ 75 ಮಂದಿಯನ್ನು ಐಸೋಲೇಶನ್ ಮಾಡಲಾಗಿದೆ. ಇನ್ನೂ 50 ಮಂದಿಯನ್ನು ಬುಧವಾರ ಮಧ್ಯಾಹ್ನದಿಂದಲೇ ಕಾರ್ಖಾನೆಗೆ ಬರದಂತೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 164 ಜನರಿಗೆ ಐಸೋಲೇಶನ್ ಮತ್ತು ಕ್ವಾರಂಟೈನ್ ಒದಗಿಸುವ ಹೆಚ್ಚುವರಿ ಸೌಲಭ್ಯಗಳನ್ನು ಜಿಂದಾಲ್ ನ
(ಎರಡು ಟೌನ್‌ಶಿಪ್‌ಗಳಾದ ವಿದ್ಯಾನಗರದಲ್ಲಿ ಸುಮಾರು 84 ಮತ್ತು ಎಚ್‌ಎಸ್‌ಟಿ 80)ಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾಗಿ 130 ಹೆಚ್ಚುವರಿ ಐಸೋಲೇಶನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಸಿಬ್ಬಂದಿಗಳ ಸುರಕ್ಷತೆ ಜತೆಗೆ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಜಿಂದಾಲ್ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.