ADVERTISEMENT

ಧ್ವನಿ, ಬೆಳಕಿನ ತಾಲೀಮು ವೀಕ್ಷಿಸಿದ ಉಪಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 14:41 IST
Last Updated 5 ಜನವರಿ 2020, 14:41 IST
ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಹೊಸಪೇಟೆಯಲ್ಲಿ ತರಬೇತಿ ಪಡೆದು ಕಲಾವಿದರು ಸಜ್ಜಾಗುತ್ತಿದ್ದು, ಭಾನುವಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಆನಂದ್‌ ಸಿಂಗ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಹೊಸಪೇಟೆಯಲ್ಲಿ ತರಬೇತಿ ಪಡೆದು ಕಲಾವಿದರು ಸಜ್ಜಾಗುತ್ತಿದ್ದು, ಭಾನುವಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಆನಂದ್‌ ಸಿಂಗ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ನಗರದಲ್ಲಿ ನಡೆಯುತ್ತಿರುವ ತಾಲೀಮನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಭಾನುವಾರ ವೀಕ್ಷಿಸಿದರು.

ಬಳಿಕ ಮಾತನಾಡಿ, ‘ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ಜನಮಾನಸದಲ್ಲಿ ಉಳಿಯುವಂತೆ ಎಲ್ಲಾ ಕಲಾವಿದರು ಪ್ರದರ್ಶನ ನೀಡಬೇಕು. ಇನ್ನೂ ಕಾಲಾವಕಾಶವಿದ್ದು, ಅಲ್ಲಿಯವರೆಗೆ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು’ ಎಂದು ಹೇಳಿದರು.

‘ಜಿಲ್ಲಾಡಳಿತದ ಕೋರಿಕೆ ಮೇರೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ಕಾರ್ಯಕ್ರಮ ನಡೆಸಲು ಒಪ್ಪಿಕೊಂಡಿರುವುದು ಸಂತೋಷದ ವಿಷಯ. ಅವರಿಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.

ADVERTISEMENT

ಶಾಸಕ ಆನಂದ್‌ ಸಿಂಗ್, ‘ಹಂಪಿ ಉತ್ಸವದಲ್ಲಿ ಅತಿ ಹೆಚ್ಚಿನ ಜನ ವೀಕ್ಷಿಸುವ ಕಾರ್ಯಕ್ರಮ ಇದಾಗಿದೆ. ಕಲಾವಿದರು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯಕ್ರಮ ನಡೆಸಿಕೊಡಬೇಕು’ ಎಂದು ತಿಳಿಸಿದರು.
ಸಚಿವಾಲಯದ ಅಧಿಕಾರಿಗಳಾದ ಎಚ್.ಕೃಷ್ಣಮೂರ್ತಿ, ಜಯಕುಮಾರ್, ಮನೋಹರ್, ಅವಿನಾಶ್ ಶ್ರೀವಾತ್ಸವ್, ನಿರ್ಮಲ್‌ ಕುಮಾರ್ ಇದ್ದರು.

ಚಿತ್ರಕಲಾ ಶಿಬಿರಕ್ಕೆ ಚಾಲನೆ:

ಉತ್ಸವದ ಪ್ರಯುಕ್ತ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಶಿಬಿರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಿತೀಶ್‌ ಶನಿವಾರ ಚಾಲನೆ ನೀಡಿದರು.

’ಸಾಮಾನ್ಯರಿಗೆ ಜಾಗೃತಿ ಮೂಡಿಸುವಂತಹ ನಿಟ್ಟಿನಲ್ಲಿ ಕಲಾವಿದರು ಕಲಾಕೃತಿಗಳನ್ನು ಮಾಡಬೇಕು’ ಎಂದು ತಿಳಿಸಿದರು.

ಸಂಸದ ವೈ.ದೇವೇಂದ್ರಪ್ಪ, ಕುಲಪತಿ ಪ್ರೊ.ಸ.ಚಿ. ರಮೇಶ, ಲಲತಕಲೆಗಳ ನಿಕಾಯದ ಡೀನ್‌ ಕೆ.ರವೀಂದ್ರನಾಥ, ಚಿತ್ರಕಲಾ ಶಿಬಿರದ ನಿರ್ದೇಶಕ ವೇಣುಗೋಪಾಲ, ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನ್‌ರಾವ್ ಬಿ.ಪಾಂಚಾಳ, ಪ್ರಾಧ್ಯಾಪಕ ಡಾ. ಕೃಷ್ಣೇಗೌಡ ಇದ್ದರು. ರಾಜ್ಯದ ವಿವಿಧ ಭಾಗದ ಕಲಾವಿದರು ಪಾಲ್ಗೊಂಡಿದ್ದರು.

ಚಿತ್ರಕಲೆ, ಚಿತ್ರಸಂತೆ ಅರ್ಜಿ ಅವಧಿ ವಿಸ್ತರಣೆ:

ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆ, ಚಿತ್ರಸಂತೆಗೆ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ಜ. 7ರ ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಜ. 5 ಕೊನೆ ದಿನವಾಗಿತ್ತು. ಒಬ್ಬರು ಎರಡು ಕಲಾಕೃತಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗಕ್ಕೆ ಜ. 7ರೊಳಗೆ ನೇರವಾಗಿ ತಂದು ಕೊಡಬಹುದು.ಹೆಚ್ಚಿನ ಮಾಹಿತಿಗೆ: 9900689982/9482850321 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.