ADVERTISEMENT

ಬಳ್ಳಾರಿ: ಕೊನೆಗೂ ಶಬ್ದಾಡಂಬರದ ದೀಪಾವಳಿಯೇ ಆಚರಣೆ

ಮಧ್ಯರಾತ್ರಿ ವರೆಗೆ ಹೆಚ್ಚಿನ ಶಬ್ದ, ಮಾಲಿನ್ಯ ಉಂಟು ಮಾಡುವ ಪಟಾಕಿಗಳ ಸದ್ದು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ನವೆಂಬರ್ 2020, 11:46 IST
Last Updated 15 ನವೆಂಬರ್ 2020, 11:46 IST
ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಶನಿವಾರ ಸಂಜೆ ನಡುರಸ್ತೆಯಲ್ಲೇ ಪಟಾಕಿ ಸಿಡಿಸಿದ ಜನ
ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಶನಿವಾರ ಸಂಜೆ ನಡುರಸ್ತೆಯಲ್ಲೇ ಪಟಾಕಿ ಸಿಡಿಸಿದ ಜನ   

ಹೊಸಪೇಟೆ: ಯಾವುದೇ ಶಬ್ದಾಂಡಬರವಿಲ್ಲದೆ ಸರಳವಾಗಿ ದೀಪಾವಳಿ ಆಚರಿಸಬೇಕು ಎಂದು ಮನವಿ ಮಾಡಿದ್ದ ರಾಜ್ಯ ಸರ್ಕಾರದ ಮಾತಿಗೆ ಜಿಲ್ಲೆಯ ಜನ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.

‘ಹೆಚ್ಚಿನ ಶಬ್ದ ಉಂಟು ಮಾಡುವ, ಮಾಲಿನ್ಯ ಸೃಷ್ಟಿಸುವ ಪಟಾಕಿಗಳನ್ನು ಯಾರೂ ಸುಡಬಾರದು. ಒಂದುವೇಳೆ ಸುಟ್ಟರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು. ಆದರೆ, ಯಾರೊಬ್ಬರೂ ಅದರ ಪರಿವೇ ಇಲ್ಲದೆ, ಸರ್ಕಾರದ ಮಾತಿಗೆ ವಿರುದ್ಧವಾಗಿಯೇ ನಡೆದುಕೊಂಡರು.

ಸಂಜೆ ಆರು ಗಂಟೆಗೆ ಪಟಾಕಿ ಸುಡುವುದನ್ನು ಆರಂಭಿಸಿದ ಜನ ಮಧ್ಯರಾತ್ರಿಯ ವರೆಗೆ ಮುಂದುವರೆಸಿದರು. ಬೆರಳೆಣಿಕೆಯಷ್ಟು ಜನ, ಹೆಚ್ಚು ಶಬ್ದ ಮಾಡದ, ಮಾಲಿನ್ಯ ಸೃಷ್ಟಿಸದ ಪಟಾಕಿಗಳನ್ನು ಸುಟ್ಟರು. ಆದರೆ, ಹೆಚ್ಚಿನವರು, ಒಂದು ರೀತಿಯಲ್ಲಿ ಸ್ಪರ್ಧೆಗೆ ಬಿದ್ದವರಂತೆ ಪಟಾಕಿ ಹಚ್ಚಿದರು. ಭಾರಿ ಶಬ್ದ, ಎಲ್ಲೆಡೆ ದಟ್ಟ ಹೊಗೆ ಸೃಷ್ಟಿಸಿ ಮಾಲಿನ್ಯ ಹಾಳು ಮಾಡುವ ಪಟಾಕಿಗಳನ್ನು ಜನ ಬೇಕಾಬಿಟ್ಟಿಯಾಗಿ ಸುಟ್ಟರು.

ADVERTISEMENT

ನಗರದ ಮೇನ್‌ ಬಜಾರ್‌, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಕಾಲೇಜು ರಸ್ತೆ, ಬಸ್‌ ನಿಲ್ದಾಣ ರಸ್ತೆ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತ ಸೇರಿದಂತೆ ಹಲವೆಡೆ ಸಂಜೆ ಮಳಿಗೆಗಳಲ್ಲಿ ಪೂಜೆ ನೆರವೇರಿಸಿ ಜನ ನಡು ರಸ್ತೆಯಲ್ಲೇ ಪಟಾಕಿ ಸಿಡಿಸಿದರು. ಬೇಕಾಬಿಟ್ಟಿ ಪಟಾಕಿ ಸಿಡಿಸಿದ್ದರಿಂದ ಅನೇಕ ಕಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಟಾಕಿಗಳನ್ನು ರಸ್ತೆಯಲ್ಲೇ ಸುಡುತ್ತಿದ್ದರಿಂದ ವಾಹನ ಸವಾರರು ಆತಂಕದಲ್ಲೇ ಹಾದು ಹೋದರು. ಮತ್ತೆ ಕೆಲವರು ಅದನ್ನು ಗಣನೆಗೆ ತೆಗೆದುಕೊಳ್ಳದೆ ಅಲ್ಲಿಂದ ತೆರಳಿದರು.

ಹೀಗೆ ಪ್ರಮುಖ ರಸ್ತೆಗಳಲ್ಲಿಯೇ ಪಟಾಕಿಗಳನ್ನು ಸಿಡಿಸಿದರೂ ಕೂಡ ಯಾರೊಬ್ಬರೂ ಅವರನ್ನು ತಡೆಯುವ ಗೋಜಿಗೆ ಹೋಗಲಿಲ್ಲ. ಕನಿಷ್ಠ ಅದನ್ನು ಪ್ರಶ್ನಿಸಿ, ತಿಳಿ ಹೇಳುವ ಕೆಲಸವೂ ಆಗಲಿಲ್ಲ. ಸಹಜವಾಗಿಯೇ ಜನ ಈ ಹಿಂದಿನಂತೆ ಮೈಮರೆತು ಎಲ್ಲೆಂದರಲ್ಲಿ ಪಟಾಕಿ ಸುಟ್ಟರು. ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಇತ್ತು.

ಇನ್ನು ಬಡಾವಣೆಗಳಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ. ಮನೆಗಳಲ್ಲಿ ಸಂಜೆ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿದ ಜನ ಕುಟುಂಬ ಸಮೇತರಾಗಿ ಮನೆ ಎದುರಿನ ರಸ್ತೆಗಳಲ್ಲಿಯೇ ಪಟಾಕಿಗಳನ್ನು ಸಿಡಿಸಿದರು. ಅಲ್ಲೂ ಭಾರಿ ಶಬ್ದದ ಪಟಾಕಿಗಳನ್ನೇ ಜನ ಸುಟ್ಟರು. ಸಂಜೆ ಆರರಿಂದ ಮಧ್ಯರಾತ್ರಿ ತನಕ ನಾಲ್ಕೂ ದಿಕ್ಕುಗಳಿಂದ ಢಂ, ಢೂಂ ಶಬ್ದ ಕೇಳಿಸಿತು. ರಾಕೆಟ್‌ಗಳು ಬಾನಲ್ಲಿ ಚಿತ್ತಾರ ಮೂಡಿಸಿದ್ದವು.

ಪಟಾಕಿ ಸಿಡಿಸಿ, ಪೂಜೆಗೆ ಬಳಸಿದ ವಸ್ತುಗಳನ್ನು ರಸ್ತೆ ಬದಿಯೇ ಎಸೆದಿದ್ದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಅಪಾರ ತ್ಯಾಜ್ಯ ಸೃಷ್ಟಿಯಾಗಿತ್ತು. ಭಾನುವಾರ ಬೆಳಕು ಹರಿಯುವ ಮುನ್ನವೇ ನಗರಸಭೆ ಸಿಬ್ಬಂದಿ ಬಂದು ಕಸ ವಿಲೇವಾರಿ ಮಾಡಿದರು.

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸದೇ ಹೋದರೆ ಹಬ್ಬ ಅಪೂರ್ಣವೆಂಬಂತೆ ಜನ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಂತೆ ಕಂಡು ಬಂತು. ಸತತ ಐದಾರೂ ಗಂಟೆ ಪಟಾಕಿ ಸಿಡಿಸಿದ್ದರಿಂದ ಇಡೀ ನಗರದ ತುಂಬೆಲ್ಲಾ ದಟ್ಟ ಹೊಗೆ ಆವರಿಸಿಕೊಂಡಿತ್ತು. ಸಿಡಿಮದ್ದಿನ ದುರ್ಗಂಧವೂ ಹರಡಿತ್ತು. ಅದಕ್ಕೆ ಹಿರಿಯ ನಾಗರಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಸೋಂಕು ಹರಡುವುದು ಈಗಷ್ಟೇ ಕಮ್ಮಿಯಾಗುತ್ತಿದೆ. ಚಳಿಯಿಂದ ಮುಂದಿನ ಒಂದೆರಡು ತಿಂಗಳಲ್ಲಿ ಮತ್ತೆ ಹೆಚ್ಚಾಗಬಹುದು. ಪಟಾಕಿ ಸುಟ್ಟರೆ ವಾಯುಮಾಲಿನ್ಯ ಉಂಟಾಗಿ ಉಸಿರಾಡಲು ಸಮಸ್ಯೆಯಾಗುತ್ತದೆ. ಅದರಲ್ಲೂ ಹಿರಿಯರಿಗೆ ಬಹಳ ಸಮಸ್ಯೆ ಎದುರಾಗಬಹುದು ಎಂದು ಸರ್ಕಾರ ಹೇಳಿದರೂ ಜನ ಅದನ್ನು ಲೆಕ್ಕಿಸದೆ ಮನಸ್ಸಿಗೆ ತೋಚಿದಂತೆ ವರ್ತಿಸಿರುವುದು ಸರಿಯಲ್ಲ. ಪಟಾಕಿ ಸುಟ್ಟರಷ್ಟೇ ದೀಪಾವಳಿ ಹಬ್ಬ ಎಂದು ಜನ ತಪ್ಪಾಗಿ ಭಾವಿಸಿದಂತಿದೆ. ಅದು ಹೋಗಬೇಕು. ಕನಿಷ್ಠ ಓದಿಕೊಂಡವರಾದರೂ ಬೇರೆಯವರಿಗೆ ತಿಳಿ ಹೇಳಬೇಕು. ಆದರೆ, ಅವರೇ ಪಟಾಕಿ ಸುಟ್ಟರೆ ಇನ್ಯಾರಿಗೆ ಹೇಳಬೇಕು’ ಎಂದು ಪಟೇಲ್‌ ನಗರದ ನಿವಾಸಿ ಬಸವರಾಜ ಬೇಸರ ವ್ಯಕ್ತಪಡಿಸಿದರು.

‘ಜನ ರಸ್ತೆ ಮಧ್ಯದಲ್ಲಿಯೇ ಪಟಾಕಿ ಸುಟ್ಟರೂ ಯಾರೊಬ್ಬರು ಅಂತಹವರನ್ನು ತಡೆಯಲು ಸಹ ಮುಂದಾಗಿಲ್ಲ. ಭಾರಿ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಜನ ನಡುರಸ್ತೆಯಲ್ಲೇ ಸುಟ್ಟಿದ್ದಾರೆ. ಜನ ಓಡಾಡಲು ತೊಂದರೆಯಾಗಿದೆ. ಸರ್ಕಾರದ ಆದೇಶ ದಿಕ್ಕರಿಸಿ ಪಟಾಕಿ ಸಿಡಿಸಿದವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಸಂಗತಿ’ ಎಂದು ಬಸವೇಶ್ವರ ಬಡಾವಣೆಯ ನಿವಾಸಿ ರಮೇಶ ಹೇಳಿದರು.

ಈ ಸಂಬಂಧ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.