ADVERTISEMENT

ಹೊಸಪೇಟೆ: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ

ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ; ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 10:19 IST
Last Updated 1 ಜುಲೈ 2021, 10:19 IST
ದಲಿತ ಹಕ್ಕುಗಳ ಸಮಿತಿಯ ಕಾರ್ಯಕರ್ತರು ಗುರುವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ದಲಿತ ಹಕ್ಕುಗಳ ಸಮಿತಿಯ ಕಾರ್ಯಕರ್ತರು ಗುರುವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯುವುದು, ಮುಖ್ಯಮಂತ್ರಿ ಕೂಡಲೇ ದೌರ್ಜನ್ಯ ವಿರೋಧಿ ಸಮಿತಿ ಸಭೆ ಕರೆಯುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ಗುರುವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಾದ್ಯಂತ ಪರಿಶಿಷ್ಟರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ದೌರ್ಜನ್ಯ ಎಸಗುವವರನ್ನು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟರ ಕುಟುಂಬಗಳಿಗೆ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನೀಡಬೇಕು. ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಸಭೆ ಕರೆದು, ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯನ್ನು ಪುನರ್‌ ಮೌಲೀಕರಿಸಿ, ರೂಪಿಸಬೇಕು. ಅರ್ಹ ಬಡ ಪರಿಶಿಷ್ಟರಿಗೆ ನೇರವಾಗಿ ಆರ್ಥಿಕ ನೆರವು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರತ್ಯೇಕ ಕಚೇರಿ ಆರಂಭಿಸಬೇಕು. ಕಾಯಂ, ಅಧಿಕಾರಿ ಸಿಬ್ಬಂದಿಯನ್ನು ನೇಮಿಸಿ ಪರಿಶಿಷ್ಟರ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಹೊಸಪೇಟೆ ತಾಲ್ಲೂಕಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರತ್ಯೇಕ ಕಚೇರಿಯಿದ್ದರೂ ಕಾಯಂ ಅಧಿಕಾರಿ ಇಲ್ಲ. ಎರಡು ವರ್ಷಗಳಿಂದ ಯಾವೊಬ್ಬ ಅಧಿಕಾರಿಯೂ ಬಂದಿಲ್ಲ. ಎರಡು ವರ್ಷಗಳ ಹಿಂದೆ ಸಂಡೂರಿಗೆ ವರ್ಗಾವಣೆಗೊಳಿಸಿರುವ ಅಧಿಕಾರಿಯನ್ನು ಮರು ನೇಮಕ ಮಾಡಬೇಕು. ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ತಾಲ್ಲೂಕು ಅಧಿಕಾರಿಗಳನ್ನು ನೇಮಿಸಬೇಕು. ಅವರು ತಾಲ್ಲೂಕು ಕೇಂದ್ರಗಳಲ್ಲೇ ವಾಸ್ತವ್ಯ ಮಾಡುವಂತೆ ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ತಾಲ್ಲೂಕು ಸಂಚಾಲಕ ಎಸ್‌. ಸತ್ಯಮೂರ್ತಿ, ಮುಖಂಡರಾದ ಬಿ. ರಮೇಶ್‌ ಕುಮಾರ್‌, ಬಿ. ತಾಯಪ್ಪ ನಾಯಕ, ಸೋಮಶೇಖರ್‌ ಬಣ್ಣದಮನೆ, ಎನ್‌. ಯಲ್ಲಾಲಿಂಗ, ಬಿಸಾಟಿ ಮಹೇಶ್‌, ಡಿ. ವೆಂಕಟರಮಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.