ADVERTISEMENT

ಬಳ್ಳಾರಿ: ಪರಿಶಿಷ್ಟರಿಗೆ ಉಚಿತ ಶಿಕ್ಷಣಕ್ಕೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 9:15 IST
Last Updated 13 ಸೆಪ್ಟೆಂಬರ್ 2021, 9:15 IST
ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ವಿಶೇಷ ಅಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ವಿಶೇಷ ಅಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿ, ಆದಿವಾಸಿ, ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು. ಪೌಷ್ಟಿಕ ಆಹಾರ ಪೂರೈಸಬೇಕೆಂದು ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಆಗ್ರಹಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಸೋಮವಾರ ಇಲ್ಲಿನ ವಿಶೇಷ ಅಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿ ಒತ್ತಾಯಿಸಿದರು.

ಶಿಕ್ಷಣ ಮೂಲಭೂತ ಹಕ್ಕು. ಕೋವಿಡ್‌ನಿಂದ ಬಡವರು, ಹಿಂದುಳಿದವರು, ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬದುಕು ನಡೆಸುವುದು ಕಷ್ಟವಾಗಿದೆ. ಇಂತಹದ್ದರಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಕೊಡುವುದು ದೂರದ ಮಾತು. ಸರ್ಕಾರವೇ ವಿಶೇಷ ಕಾಳಜಿ ವಹಿಸಿ, ಎರಡೂ ಒದಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕೋವಿಡ್‌ ರೋಗಿಗಳಿಗೆ ಸೂಕ್ತ ಚಿಕಿತ್ಸೆಗಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲ ಸೌಲಭ್ಯ ಹೊಂದಿರುವ ಕನಿಷ್ಠ 50 ಹಾಸಿಗೆಯುಳ್ಳ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ ಕನಿಷ್ಠ ಆರು ತಿಂಗಳು ಕೆಲಸ ನೀಡಬೇಕು. ಉದ್ಯೋಗ ಖಾತ್ರಿಗೆ ಹೆಚ್ಚಿನ ಅನುದಾನ ಕೊಡಬೇಕು ಎಂದು ಒತ್ತಾಯಿಸಿದರು.

ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಸರ್ಕಾರ ಅದನ್ನು ನಿಯಂತ್ರಿಸಲು ಮುಂದಾಗಬೇಕು. ಅನೇಕ ವರ್ಷಗಳಿಂದ ಪಟ್ಟಾ ಇಲ್ಲದೆ ಉಳುಮೆ ಮಾಡುತ್ತಿರುವವರಿಗೆ ಹಕ್ಕು ಪತ್ರ ಕೊಡಬೇಕು. ಭೂಹೀನರಿಗೆ ಕೃಷಿ ಜಮೀನು ನೀಡಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ₹5ರಿಂದ ₹7 ಲಕ್ಷ ಸಹಾಯ ಧನ ನೀಡಬೇಕು. ವಲಸೆ ಕಾರ್ಮಿಕರ ಸಾಮಾಜಿಕ ಭದ್ರತೆ ವಿಶೇಷ ಯೋಜನೆ ರೂಪಿಸಬೇಕು. ಪರಿಶಿಷ್ಟರು ವಾಸಿಸುವ ಎಲ್ಲಾ ಕಾಲೊನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಸಂಘಟನೆಯ ಅಧ್ಯಕ್ಷ ಎ.ಕೆ. ಮಾರೆಪ್ಪ, ಗೌರವ ಅಧ್ಯಕ್ಷ ಎ. ಬಸವರಾಜ, ಉಪಾಧ್ಯಕ್ಷ ಜಿ. ವೆಂಕಟೇಶ, ಕಾರ್ಯದರ್ಶಿ ಜಿ. ಸುರೇಶಕುಮಾರ, ಸಂಘಟನಾ ಕಾರ್ಯದರ್ಶಿ ಪಂಪಾಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.