ಹೂವಿನಹಡಗಲಿ: ‘ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಇಲ್ಲಿನ ಪೌರ ನೌಕರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಜಿ. ಸಂತೋಷಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪೌರ ನೌಕರರಿಗೆ ಕೆಜಿಐಡಿ, ಜಿಪಿಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಬಹುದಿನಗಳಿಂದ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಏ. 12 ರಿಂದ ಮೇ 26ರವರೆಗೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಲಿದ್ದೇವೆ. ಸರ್ಕಾರ ಕಾಲಮಿತಿಯೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಕಚೇರಿ ಕೆಲಸ, ನೈರ್ಮಲ್ಯ, ಕುಡಿಯುವ ನೀರು ಸರಬರಾಜು, ಬೀದಿದೀಪ ನಿರ್ವಹಣೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ತೀವ್ರಗೊಳಿಸುತ್ತೇವೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಎಚ್. ಯಮನಪ್ಪ, ಕಾರ್ಯದರ್ಶಿ ಟಿ. ರಾಮಮೂರ್ತಿ, ಸಂಘಟನಾ ಕಾರ್ಯದರ್ಶಿ ಮೈಲಾರಪ್ಪ, ಮಾರುತಿ, ಎಚ್. ಕೋಟಿ, ಗವಿಯಪ್ಪ, ಸಂತೋಷ, ಎಸ್. ಬಸವರಾಜಪ್ಪ, ಸಿ. ಪ್ರಕಾಶ, ಟಿ. ವಿಜಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.