ADVERTISEMENT

ಬಸ್ ಸೌಲಭ್ಯಕ್ಕಾಗಿ ಬಳ್ಳಾರಿಯಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 7:46 IST
Last Updated 23 ಫೆಬ್ರುವರಿ 2021, 7:46 IST
   

ಬಳ್ಳಾರಿ: ಸಮರ್ಪಕ‌ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಗರದ ಬಂಡಿಹಟ್ಟಿ ಪ್ರದೇಶದಲ್ಲಿ ಮಂಗಳವಾರ ನಗರ ಸಾರಿಗೆಯ ಬಂಡಿಹಟ್ಟಿ- ದುರ್ಗಮ್ಮ ಗುಡಿ ಮಾರ್ಗದ ಬಸ್ ತಡೆದು ಧರಣಿ ನಡೆಸಿದರು.

ಬೆಳಿಗ್ಗೆ ವೇಳೆ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚಾರ ಇಲ್ಲದಿರುವುದರಿಂದ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಬೆಳಿಗ್ಗೆ 7.30 ಕ್ಕೆ, 8 ಗಂಟೆಗೆ ಬಸ್ ಸೌಕರ್ಯ ಇಲ್ಲದಿರುವುದರಿಂದ ಸಕಾಲಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯ ವಾಗುತ್ತಿಲ್ಲ.‌ 9.30ರ ಬಳಿಕ ಬಸ್ ಬಂಡಿಹಟ್ಟಿಗೆ ಬರುವುದರಿಂದ ಪ್ರಯೋಜನವಾಗುವುದಿಲ್ಲ.
ಕೂಡಲೇ ಹೆಚ್ಚಿನ ಬಸ್ ‌ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಬಂಡಿಹಟ್ಟಿಯಿಂದ‌ ಗಡಿಗಿ ಚೆನ್ನಪ್ಪ ವೃತ್ತ, ಎಸ್ಪಿ ವೃತ್ತ, ದುರ್ಗಮ್ಮ ಗುಡಿ ವೃತ್ತದ ಕಡೆಗೆ ಬಸ್ ಸೌಕರ್ಯ ಬೇಕಾಗಿದೆ. ಆ ಪ್ರದೇಶಗಳಲ್ಲಿರುವ ಶಾಲೆ,‌ ಕಾಲೇಜುಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬಂಡಿಹಟ್ಟಿಯಿಂದ ತೆರಳುತ್ತಾರೆ ಎಂದು ಮುಖಂಡ ಕೆ‌.ಶಿವಶರಣ ಆಗ್ರಹಿಸಿದರು.

ನಗರ ಸಾರಿಗೆ ಡಿಪೋ ವ್ಯವಸ್ಥಾಪಕರು ಸ್ಥಳಕ್ಕೆ ಬರುವವರೆಗೂ ಬಸ್ ಸಂಚಾರಕ್ಕೆ ಅನುವು ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

ಡಿಪೋ ಪ್ರತಿನಿಧಿಯೊಬ್ಬರು ಬಂದು ಮನವಿ ಪಡೆದು, ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ‌ ಬಳಿಕ ಧರಣಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.